ಪ್ರಜಾಸ್ತ್ರ ಸುದ್ದಿ
ಹಾವೇರಿ(Haveri): ರಾತ್ರಿ ಊಟ ಮಾಡಿ ಮಲಗಿದ್ದವರ ಮೇಲೆ ರೋಡ್ ರೋಲರ್(Road Roller) ಹರಿದು ಇಬ್ಬರು ಕಾರ್ಮಿಕರು ಮೃತಪಟ್ಟ ದಾರುಣ ಘಟನೆ ಜಿಲ್ಲೆಯ ಬ್ಯಾಡಗಿ(Byadagi) ತಾಲೂಕಿನ ಮೋಟೆಬೆನ್ನೂರು ಹತ್ತಿರ ನಡೆದಿದೆ. ಅಳಲಗೇರಿ ಗ್ರಾಮದ ಪ್ರೀತಮ ಕಿಳ್ಳಿಕ್ಯಾತರ(24) ಹಾಗೂ ಸಿದ್ದು ಕಿಳ್ಳಿಕ್ಯಾತರ(24) ಮೃತ ದುರ್ದೈವಿಗಳು. ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ದುರಸ್ತಿ ಕೆಲಸ ನಡೆದಿದೆ. ಹೀಗಾಗಿ ಊಟ ಮಾಡಿ ರಸ್ತೆ ಪಕ್ಕದಲ್ಲಿ ಮಲಗಿದ್ದಾರೆ. ಏಕಾಏಕಿ ರೋಡ್ ರೋಲರ್ ಅವರ ಮೇಲೆ ಹರಿದಿದೆ.
ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಗುತ್ತಿಗೆದಾರ ಬರುವ ತನಕ ಮೃತದೇಹ ತೆಗೆಯುವುದಿಲ್ಲವೆಂದು ರಾತ್ರಿಯೇ ಪ್ರತಿಭಟನೆ(Protest) ನಡೆಸಲಾಗಿದೆ. ಮೃತರ ಕುಟುಂಬಸ್ಥರಿಗೆ ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ. ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣ, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮಲಗಿದವರ ಮೇಲೆ ರೋಡ್ ರೋಲರ್ ಹರಿದಿದ್ದು ಹೇಗೆ ಎನ್ನುವ ಪ್ರಶ್ನೆ ಮೂಡಿದೆ. ಇದೆಲ್ಲವೂ ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.