ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಪಟ್ಟಣದಲ್ಲಿರುವ ಬಸ್ ಡಿಪೋ ಹತ್ತಿರದ ಹುಡುಕೋ ಕಾಲನಿಯ ಹತ್ತಿರ ಶಾಲಾ ಬಸ್ ವೊಂದು ರಸ್ತೆ ಬಿಟ್ಟು ಕೆಳಗೆ ನುಗ್ಗಿದ ಘಟನೆ ಮಂಗಳವಾರ ಮುಂಜಾನೆ ನಡೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಮಾತಾ ಲಕ್ಷ್ಮಿ ಪಬ್ಲಿಕ್ ಶಾಲೆಯ ವಾಹನ ಹಾಗೂ ಹಿರಾಮಾತಾ ಶಾಲಾ ವಾಹನ ನಡುವೆ ಸೈಡ್ ಕೊಡಲು ಹೋದ ಸಂದರ್ಭದಲ್ಲಿ ಶಾಲಾ ಬಸ್ ರಸ್ತೆಯಿಂದ ಪಕ್ಕಕ್ಕೆ ಇಳಿದಿದೆ. ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರೂ ಅನಾಹುತ ನಡೆಯುತ್ತಿತ್ತು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಘಟನೆ ನಡೆದ ಬಳಿಕ ಸ್ಥಳೀಯರು ಬಸ್ ಚಾಲಕರನ್ನು ತಡೆದು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ಪುರಸಭೆಯವರು ಬಂದು ಇಲ್ಲಿನ ಸಮಸ್ಯೆ ನೋಡಿಕೊಂಡು ಹೋಗಲಿ, ಇಲ್ಲಿನ ಸಮಸ್ಯೆಗೆ ಪರಿಹಾರ ಕಲ್ಪಿಸುವ ಕುರಿತು ಹೇಳಿ ಬಸ್ ತೆಗೆಯಲಿ ಎಂದು ವಾಗ್ವಾದ ನಡೆದಿದೆ. ಈ ವಿಚಾರದ ಬಗ್ಗೆ ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ, ಮುಖ್ಯಾಧಿಕಾರಿ ಸುರೇಶ ನಾಯಕ ಅವರೊಂದಿಗೆ ಸ್ಥಳೀಯರು ಫೋನ್ ಮಾಡಿ ಮಾತನಾಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಅಧ್ಯಕ್ಷರಾದ ಶಾಂತವೀರ ಬಿರಾದಾರಅವರಿಗೆ, ಈ ರೀತಿಯ ರಸ್ತೆ ನಿರ್ಮಾಣ ಮಾಡಿದ ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸ್ಥಳೀಯರು ಒತ್ತಾಯಿಸಿದರು. ಇದಕ್ಕೆ ಅವರು ಸ್ಪಂದಿಸಿ ಕೂಡಲೇ ಸಮಸ್ಯೆ ಬಗೆಹರಿಸಲಾಗುವುದು ಎಂದಿದ್ದಾರೆ.
ತಾಲೂಕಿನಲ್ಲಿ ನೂರಾರು ಶಾಲಾ ಬಸ್ ಗಳು ಸಂಚರಿಸುತ್ತವೆ. ಆದರೆ, ಚಾಲಕರು ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದೇವೆ ಎನ್ನುವುದನ್ನು ಮರೆತು ಅತಿ ವೇಗವಾಗಿ ಬಸ್ ಚಲಾಯಿಸುತ್ತಾರೆ. ಈ ಕುರಿತು ತಾಲೂಕಿನ ಎಲ್ಲ ಖಾಸಗಿ ಶಾಲೆಯ ಮುಖ್ಯಸ್ಥರು, ವಾಹನ ಚಾಲಕರ ಸಭೆಯನ್ನು ಶಿಕ್ಷಣ, ಪುರಸಭೆ, ಪೊಲೀಸ್, ಸಾರಿಗೆ ಇಲಾಖೆಯವರು ಮಾಡಬೇಕು. ಯಾವ ರೀತಿ ಶಾಲಾ ಬಸ್ ಗಳನ್ನು ಚಲಾಯಿಸಬೇಕು. ಅವರಿಗೆ ಸಮವಸ್ತ್ರ ಸೇರಿದಂತೆ ರಸ್ತೆ ಸುರಕ್ಷತೆ ಬಗ್ಗೆ ತಿಳವಳಿಕೆ ನೀಡಬೇಕು. ಅನಾಹುತವಾದರೆ ಸಂಬಂಧಪಟ್ಟವರನ್ನು ಹೊಣೆಗಾರರನ್ನಾಗಿ ಮಾಡಬೇಕು. – ಅಶೋಕ ಅಲ್ಲಾಪೂರ, ಅಧ್ಯಕ್ಷರು, ನಗರ ಸುಧಾರಣಾ ವೇದಿಕೆ
ಇತ್ತೀಚೆಗೆ ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿ ನಡೆದ ಭೀಕರ ಶಾಲಾ ಬಸ್ ಅಪಘಾತದಿಂದ ಬಹುದೊಡ್ಡ ಅನಾಹುತವೇ ನಡೆದಿದೆ. ಹೀಗಾಗಿ ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ. ಆದ್ದರಿಂದ ಪಟ್ಟಣ ಸೇರಿದಂತೆ ತಾಲೂಕಿನಲ್ಲಿರುವ ಖಾಸಗಿ ಶಾಲೆಗಳ ಮುಖ್ಯಸ್ಥರೊಂದಿಗೆ ಸಂಬಂಧಪಟ್ಟ ಇಲಾಖೆಯವರು ಸಭೆ ನಡೆಸಿ ಎಚ್ಚರಿಕೆ ನೀಡಬೇಕು. ಮಕ್ಕಳಿಗೆ ಏನಾದರೂ ಆದರೆ ಹೆತ್ತವರು ಏನು ಮಾಡಬೇಕು ಎನ್ನುವ ಆಕ್ರೋಶ ವ್ಯಕ್ತವಾಗಿದೆ. ಈ ವೇಳೆ ಬಸವರಾಜ ಬೋರಗಿ, ಶ್ರೀಶೈಲ ಯಳಮೇಲಿ, ಇಬ್ರಾಹಿಂ ಆಳಂದ, ಶಾಂತು ರಾಣಾಗೋಳ, ಅವಧೂತ ಜೋಶಿ ಸೇರಿದಂತೆ ಅನೇಕರು ಇದ್ದರು.