ಪ್ರಜಾಸ್ತ್ರ ಸುದ್ದಿ
ಮಂಡ್ಯ(Mandaya): ಈ ಜಗತ್ತಿನಲ್ಲಿ ಯಾರಿಗೆ ಕಷ್ಟವಿಲ್ಲ ಹೇಳಿ. ಎಲ್ಲರದ್ದೂ ಒಂದೊಂದು ಕಥೆ. ಹಾಗಂತ ತಂದೆ, ತಾಯಿಯನ್ನ, ಮಕ್ಕಳನ್ನು ರಸ್ತೆಯಲ್ಲಿ ಬಿಟ್ಟು ಹೋಗಲು ಆಗುತ್ತಾ? ಆದ್ರೆ, ಇಲ್ಲೊಬ್ಬ ಮಗ ವಯಸ್ಸಾದ ಮಾನಸಿಕ ಅಸ್ವಸ್ಥೆ ತಾಯಿಯನ್ನು ನಡುಬೀದಿಯಲ್ಲಿ ಬಿಟ್ಟು ಹೋಗಿದ್ದಾನೆ. ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದ ರಸ್ತೆಯ ಬದಿಯಲ್ಲಿ ವೃದ್ಧೆ ಮಗನ ಬರುವಿಕೆಗಾಗಿ ಕಾಯುತ್ತಾ ಕುಳಿತಿದ್ದ ದೃಶ್ಯ ನೋಡಗರ ಹೃದಯ ಹಿಂಡಿದೆ.
ವೃದ್ಧೆ ರುದ್ರಮ್ಮಳನ್ನು ಸಾರ್ವಜನಿಕರು ವಿಚಾರಿಸಿದಾಗ ಇಲ್ಲೆ ಇರು ಬರ್ತಿನಿ ಎಂದು ಹೇಳಿ ಮಗ ಹೋಗಿದ್ದಾನೆ ಎಂದು ಹೇಳುತ್ತಾಳೆ. ಈ ಘಟನೆ ವಿಡಿಯೋ ವೈರಲ್ ಆಗಿದೆ. ವೃದ್ದೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಜನರು ಮಗನನ್ನು ಪತ್ತೆ ಮಾಡಿ ವಿಚಾರಿಸಿದರೆ, ಅವನು ತನ್ನ ಕಷ್ಟ ಹೇಳಿಕೊಂಡಿದ್ದಾನೆ. ಜಿಲ್ಲಾಸ್ಪತ್ರೆಗೆ ಬಂದ ಮಗ ಮಹಾದೇವಸ್ವಾಮಿ, ಬೆಂಗಳೂರಲ್ಲಿ ಬೀದಿ ವ್ಯಾಪಾರ ಮಾಡುತ್ತಾ ಜೀವನ ಮಾಡುತ್ತಿದ್ದು, ತಾಯಿಯನ್ನು ನೋಡಿಕೊಳ್ಳಲು ಆಗದಷ್ಟು ಕಷ್ಟವಿದೆ. ಅನಾಥ ಆಶ್ರಮಕ್ಕೆ ಸೇರಿಸಿ ಎಂದು ಹೇಳಿದ್ದಾನಂತೆ. ಕಷ್ಟ ತೀರಿದ ಬಳಿಕ ನೋಡಿಕೊಳ್ಳುತ್ತೇನೆ ಎನ್ನುತ್ತಾನಂತೆ. 70-80 ವರ್ಷದ ವೃದ್ಧೆಯನ್ನು ಅಧಿಕಾರಿಗಳು ಅನಾಥ ಆಶ್ರಮಕ್ಕೆ ಸೇರಿಸಲು ಮುಂದಾಗಿದ್ದಾರೆ.