ಪ್ರಜಾಸ್ತ್ರ ಸುದ್ದಿ
ಮಂಡ್ಯ(Mandya): ಆಸ್ತಿಗಾಗಿ ಏನು ಬೇಕಾದರೂ ಮಾಡಲು ಹೋಗುವ ಜನರು ನಮ್ಮ ನಡುವೆ ಇದ್ದಾರೆ. ಅದೆ ರೀತಿ ಇಲ್ಲೊಬ್ಬ ಮಗ ಆಸ್ತಿಗಾಗಿ ತಂದೆಗೇ ಬ್ಲ್ಯಾಕ್ ಮೇಲ್ ಮಾಡಿದ ಘಟನೆ ನಡೆದಿದೆ. ಜಿಲ್ಲೆಯ ಮದ್ದೂರು ಪಟ್ಟಣದಲ್ಲಿ ಈ ಕೃತ್ಯ ನಡೆದಿದ್ದು, ಮಗನ ವಿರುದ್ಧ ತಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸತೀಶ್ ಎಂಬುವರು ರಾಣಿ ಐಶ್ವರ್ಯ ಡೆವಲಪರ್ಸ್ ಹೆಸರಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಮಾಡುತ್ತಿದ್ದಾರೆ. ಮಗನ ಹೆಸರಲ್ಲಿ ಕೋಟ್ಯಾಂತರ ರೂಪಾಯಿ ಆಸ್ತಿ ಮಾಡಿದ್ದಾರೆ. ಆದರೆ, ಇವರ ಮಗ ಪ್ರಣವ್(25) ಮೋಜು, ಮಸ್ತಿ ಎಂದು ಈ ಹಿಂದೆ 2 ಕೋಟಿ ರೂಪಾಯಿ ಆಸ್ತಿ ಮಾರಿದ್ದಾನಂತೆ. ಇವನ ಹೆಸರಲ್ಲಿ ಇನ್ನು 5 ಕೋಟಿ ರೂಪಾಯಿ ಆಸ್ತಿ ಇದೆ. ಇದನ್ನು ಮಾರದಂತೆ ಕೋರ್ಟ್ ನಿಂದ ತಡೆಯಾಜ್ಞೆ ತೆಗೆದುಕೊಂಡು ಬಂದಿದ್ದಾರೆ. ಹೀಗಾಗಿ ಆಸ್ತಿ ಪಡೆಯಲು ತಂದೆಗೆ ಬೆದರಿಕೆ ಹಾಕಿದ್ದಾನೆ.
ಪ್ರಣವ್ ತನ್ನ ಸ್ನೇಹಿತರಾದ ಪ್ರೀತಂ, ಈಶ್ವರ್, ಮಹೇಶ್ ನೊಂದಿಗೆ ಸೇರಿಕೊಂಡು ತಂದೆಯ ಫೋಟೋವನ್ನು ಅಶ್ಲೀಲವಾಗಿ ಎಡಿಟ್ ಮಾಡಿದ್ದಾನೆ. ವಾಯ್ಸ್ ಕ್ಲಿಪ್ ಸಿದ್ಧಮಾಡಿ ವಾಟ್ಸಪ್ ಗೆ ಕಳಿಸಿದ್ದಾನೆ. ಹಣ ಕೊಡದಿದ್ದರೆ ಮುಗಿಸುತ್ತೇನೆ ಎಂದು ಹೇಳಿದ್ದಾನಂತೆ. ಹೀಗಾಗಿ ಸತೀಶ್ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಣವ್ ಸೇರಿ ಆತನ ಮೂವರು ಸ್ನೇಹಿತರನ್ನು ವಶಕ್ಕೆ ಪಡೆದಿದ್ದಾರೆ. ಕೋರ್ಟ್ ಇದೀಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.