ಪ್ರಜಾಸ್ತ್ರ ಅಪರಾಧ ಸುದ್ದಿ
ಬೆಂಗಳೂರು(Bengaloru): ಪಿಜಿಯೊಂದಕ್ಕೆ ನುಗ್ಗಿದ ದುಷ್ಕರ್ಮಿಯೊಬ್ಬ ಯುವತಿಯನ್ನು(Girl) ಹತ್ಯೆ ಮಾಡಿದ ಘಟನೆ ಐಟಿ ಸಿಟಿಯಲ್ಲಿ ನಡೆದಿದೆ. ಕೋರಮಂಗಲದಲ್ಲಿರುವ ವಿ.ಆರ್ ಲೇಔಟ್ ನ ಮಹಿಳಾ ಪಿಜಿಯಲ್ಲಿ(PG) ರಾತ್ರಿ ಸುಮಾರು 11.10ರಿಂದ 11.30ರ ನಡುವೆ ಈ ಕೃತ್ಯ ನಡೆದಿದೆ. ಕೃತಿಕುಮಾರಿ(24) ಕೊಲೆಯಾದ ಯುವತಿ. ಚಾಕುವಿನಿಂದ ಕತ್ತು ಕೊಯ್ದು ಹತ್ಯೆ ಮಾಡಿದ ಭೀಕರ ಕೃತ್ಯ ನಡೆದಿದೆ.
ಕೊಲೆಯಾದ ಯುವತಿ ಕೃತಿಕುಮಾರಿ ಖಾಸಗಿ ಕಂಪನಿಯಲ್ಲಿ(Private Company) ಕೆಲಸ ಮಾಡುತ್ತಿದ್ದಳು. ಹೀಗಾಗಿ ಪಿಜಿಯಲ್ಲಿ ವಾಸವಾಗಿದ್ದಳು. 3ನೇ ಮಹಡಿಯಲ್ಲಿರುವ ಪಿಜಿಗೆ ಬಂದಿದ್ದ ದುಷ್ಕರ್ಮಿ ಚಾಕುವಿನಿಂದ ಕತ್ತು ಕೊಯ್ದು ಹತ್ಯೆ(Murder) ಮಾಡಿದ್ದಾನೆ. ಪರಿಚಯಸ್ಥ ಯುವಕನಿಂದಲೇ ಈ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ. ಇನ್ನು ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸದ ಪಿಜಿ ಮಾಲೀಕರ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಘಟನಾ ಸ್ಥಳಕ್ಕೆ ಕೋರಮಂಗಲ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳಕ್ಕೆ ಆಗ್ನೇಯ ವಿಭಾಗದ ಡಿಸಿಪಿ(DCP) ಸಾರಾ ಫಾತಿಮಾ ಬಂದು ಮಾಹಿತಿ ಪಡೆದುಕೊಂಡರು. ಸಿಸಿಟಿವಿ(CCTV) ದೃಶ್ಯಗಳನ್ನು ಆಧಾರಿಸಿ ಹಂತಕನ ಬಂಧನಕ್ಕೆ ಖಾಕಿ ಪಡೆ ಇಳಿದಿದೆ. ಕೊಲೆಯಾದ ಯುವತಿಗೂ ಆರೋಪಿಗೂ ಏನು ಸಂಬಂಧ? ಯಾರು ಅವನು? ಹತ್ಯೆಗೆ ಏನು ಕಾರಣ? ಕೃತಿಕುಮಾರಿ ಮೂಲತಃ ಎಲ್ಲಿಯವಳು ಅನ್ನೋದು ಸೇರಿದಂತೆ ಎಲ್ಲ ರೀತಿಯ ತನಿಖೆ ನಡೆಯುತ್ತಿದೆ. ಇನ್ನು ಪಿಜಿಯ ಮಾಲೀಕರು ಸುರಕ್ಷತೆಯ ದೃಷ್ಟಿಯಿಂದ ಸೆಕ್ಯೂರಿಟಿಯವರನ್ನು ನೇಮಿಸಬೇಕು. ಅಪರಿಚಿತರು ಬಂದರೆ ಕಡ್ಡಾಯವಾಗಿ ಅವರ ಆಧಾರ್ ಕಾರ್ಡ್ ಪರಿಶೀಲಿಸಿ, ಹೆಸರು, ಫೋನ್ ನಂಬರ್ ಬರೆದುಕೊಂಡು, ಯಾರನ್ನು ಯಾವ ಕಾರಣಕ್ಕೆ ಭೇಟಿಯಾಗಿ ಬಂದಿದ್ದಾರೆ ತಿಳಿದುಕೊಂಡು, ಮಹಿಳಾ ಪಿಜಿಗೆ ಪುರುಷರನ್ನು ಒಳಗೆ ಬಿಡದೆ ಹೊರಗಿನಿಂದಲೇ ಭೇಟಿಗೆ ಅವಕಾಶ ಕೊಡಬೇಕು.