ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belagavi): ಅತಿಯಾದ ಕುಡಿತ ಅನೇಕ ಜೀವನ, ಜೀವ ಹಾಳು ಮಾಡಿದೆ. ಆದರೂ ಅದರಿಂದ ಹೊರ ಬರಲು ಅನೇಕರು ಪ್ರಯತ್ನಿಸುವುದೇ ಇಲ್ಲ. ಇದರ ಪರಿಣಾಮ ಜೀವ ಕಳೆದುಕೊಳ್ಳುತ್ತಿರುವುದು ನಿಲ್ಲುತ್ತಿಲ್ಲ. ಹೀಗೆ ಅತಿಯಾಗಿ ಕುಡಿದು ರಸ್ತೆಯಲ್ಲಿ ಬಿದ್ದಿದ್ದ ಯುವಕನ ಮೇಲೆ ಶನಿವಾರ ಮಧ್ಯರಾತ್ರಿ ನಾಯಿಗಳು ದಾಳಿ ಮಾಡಿವೆ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಯುವಕ ಇದೀಗ ಮೃತಪಟ್ಟಿದ್ದಾನೆ. ಕಾರ್ಮಿಕ ಶಿವಾನಂದ ಕುಂಬಾರ(35) ಮೃತ ದುರ್ದೈವಿ ಎಂದು ತಿಳಿದು ಬಂದಿದೆ.
ಜಿಲ್ಲೆಯ ರಾಯಬಾಗ ತಾಲೂಕಿನ ಸೌಂದತ್ತಿ ಗ್ರಾಮದ ದಿಗಜ್ಜವಾಡಿ ರಸ್ತೆಯ ಹತ್ತಿರ ಶಿವಾನಂದ ಕುಡಿದು ಬಿದ್ದಿದ್ದಾನೆ. ರಾತ್ರಿ ಸುಮಾರು 1.30ರ ಸಮಯದಲ್ಲಿ ಬೀದಿ ನಾಯಿಗಳು ದಾಳಿ ಮಾಡಿವೆ. ಇದರಿಂದಾಗಿ ಆತ ತೀವ್ರವಾಗಿ ಗಾಯಗೊಂಡಿದ್ದಾನೆ. ಇವನನ್ನು ಚಿಕ್ಕೋಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಕುಡಿತದ ಮತ್ತು ಜೀವವನ್ನೇ ಬಲಿ ಪಡೆದಿದೆ.