ಪ್ರಜಾಸ್ತ್ರ ಸುದ್ದಿ
ಇತ್ತೀಚೆಗೆ ಮುಕ್ತಾಯಗೊಂಡ ಏಷ್ಯ ಕಪ್ ಟಿ-20 ಕ್ರಿಕೆಟ್ ಟೂರ್ನಿಯ ವೇಳೆ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ವೇಳೆ ಹಲವು ಘಟನೆಗಳು ನಡೆದಿದ್ದು, ಇದಕ್ಕೆ ಪರ ವಿರೋಧದ ಮಾತುಗಳು ಕೇಳಿ ಬಂದಿವೆ. ಪಾಕ್ ಆಟಗಾರರಿಗೆ ಹಸ್ತಲಾಘವ ಮಾಡದೆ ಇರುವುದು, ಫೈನಲ್ ಪಂದ್ಯ ಗೆದ್ದ ಬಳಿಕ ಏಷ್ಯನ್ ಕ್ರಿಕೆಟ್ ಸಮಿತಿ ಅಧ್ಯಕ್ಷ ಆಗಿರುವ ಪಾಕ್ ಸಚಿವ ಮೊಹಸೀನ್ ನಖ್ವಿ ಅವರ ಕೈಯಿಂದ ಟ್ರೋಫಿ ಸ್ವೀಕರಿಸಲು ಟೀಂ ಇಂಡಿಯಾ ಆಟಗಾರರು ನಿರಾಕರಿಸಿದರು. ಇದು ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿದೆ.
ಈ ಬಗ್ಗೆ ತಮ್ಮ ಯುಟ್ಯೂಬ್ ಚಾನಲ್ ಮೂಲಕ ಬೇಸರ ವ್ಯಕ್ತಪಡಿಸಿರುವ ಸೌಥ್ ಆಫ್ರಿಕಾ ಮಾಜಿ ಆಟಗಾರ ಎಬಿಡಿ, ಕ್ರೀಡೆ ಹಾಗೂ ರಾಜಕೀಯ ನಡುವೆ ಅಂತರ ಕಾಯ್ದುಕೊಳ್ಳುವುದು ಒಳ್ಳೆಯದು. ಕ್ರೀಡೆಯಿಂದ ರಾಜಕೀಯ ದೂರವಿರಬೇಕು. ಕ್ರೀಡೆಯನ್ನು ಕ್ರೀಡೆಯಾಗಿ ನೋಡಿ ಸಂಭ್ರಮಿಸಬೇಕು. ಆದರೆ, ಮೊನ್ನೆ ನಡೆದಿದ್ದು ನೋಡಿ ಬೇಸರವಾಯಿತು. ಇದನ್ನು ನಾನು ಖಂಡಿಸುತ್ತೇನೆ ಎಂದಿದ್ದಾರೆ.
ಕ್ರೀಡೆ, ಆಟಗಾರರರು ಮತ್ತು ಕ್ರಿಕೆಟಿಗರನ್ನು ತುಂಬಾ ಕಠಿಣ ಸ್ಥಾನದಲ್ಲಿ ಇರಿಸುತ್ತದೆ. ಮುಂದಿನ ದಿನಗಳಲ್ಲಿ ಇದು ಪುನಾರಾವರ್ತಿತವಾಗುವುದಿಲ್ಲವೆಂದು ಆಶಿಸುತ್ತೇನೆ ಎಂದು ಎಬಿ ಡಿವಿಲಿಯರ್ಸ್ ಹೇಳಿದ್ದಾರೆ. ಎಬಿಡಿಗೆ ಭಾರತದಲ್ಲಿಯೂ ಅಪಾರ ಅಭಿಮಾನಿಗಳಿದ್ದಾರೆ. ಅದರಲ್ಲೂ ಆರ್ ಸಿಬಿ ಹುಡುಗರ ನೆಚ್ಚಿನ ಆಟಗಾರರಲ್ಲಿ ಇವರು ಒಬ್ಬರು. ಈಗ ಮಹಿಳಾ ಟಿ-20 ವಿಶ್ವಕಪ್ ನಡೆಯುತ್ತಿದ್ದು, ಅಕ್ಟೋಬರ್ 5ರಂದು ಭಾರತ ಹಾಗೂ ಪಾಕ್ ನಡುವೆ ಪಂದ್ಯವಿದೆ. ಅಂದು ಏನಾಗುತ್ತೆ ಅನ್ನೋ ಕುತೂಹಲವಿದೆ.