ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ 17 ಆರೋಪಿಗಳಲ್ಲಿ ಒಬ್ಬನಾಗಿರುವ ಅನುಕುಮಾರ್ ಇಂದು ಜೈಲಿನಿಂದ ಹೊರ ಬಂದಿದ್ದಾನೆ. ಕಳೆದ ಶುಕ್ರವಾರ ಹೈಕೋರ್ಟ್ 7 ಜನರಿಗೆ ನಿಯಮಿತ ಜಾಮೀನು ಮಂಜೂರು ಮಾಡಿದೆ. ಆದರೆ, ಶ್ಯೂರಿಟಿ ಸಮಸ್ಯೆಯಿಂದ ಬಿಡುಗಡೆಯಾಗಿರಲಿಲ್ಲ. ಇಂದು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾನೆ.
ಈ ಮೊದಲು ಎಲ್ಲ ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ಇಡಲಾಗಿತ್ತು. ಆದರೆ, ನಟ ದರ್ಶನ್, ಮ್ಯಾನೇಜರ್ ನಾಗರಾಜ್ ಹಾಗೂ ಬೇರೆ ಪ್ರಕರಣದಲ್ಲಿ ಜೈಲಿನಲ್ಲಿರುವವರಿಬ್ಬರು ಸಿಗರೇಟ್ ಸೇದುತ್ತಾ, ಕಾಫಿ ಕುಡಿಯುತ್ತಾ ಕುರ್ಚಿಯಲ್ಲಿ ಕುಳಿತ ಫೋಟೋ ವೈರಲ್ ಆಗಿತ್ತು. ಇದಾದ ಬಳಿಕ ನಟ ದರ್ಶನ್ ಬಳ್ಳಾರಿ, ಇತರೆ ಮೂವರು ತುಮಕೂರು ಜೈಲಿಗೆ ವರ್ಗಾಯಿಸಲಾಗಿತ್ತು. ಆ ಸಂದರ್ಭದಲ್ಲಿ ನಟ ದರ್ಶನ್ ಸ್ನೇಹಿತರು ನೀಡಿದ್ದ ಭಗವದ್ಗೀತೆ ಪುಸ್ತಕವನ್ನು ಅನುಕುಮಾರ್ ತೆಗೆದುಕೊಂಡು ಇಂದು ಹೊರ ಬಂದರು. ನಟ ದರ್ಶನ್ ಡಿಸೆಂಬರ್ 18ರಂದು ಬಿಜಿಎಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಪತ್ನಿ ಮನೆಗೆ ಹೋಗಿದ್ದಾರೆ.