ಪ್ರಜಾಸ್ತ್ರ ಸುದ್ದಿ
ಕಲಬುರಗಿ(Kalaburagi): ಅಮಾಯಕ ಹೆಣ್ಮಕ್ಕಳನ್ನು ಬಳಸಿಕೊಂಡು ಸರ್ಕಾರಿ ಅಧಿಕಾರಿಗಳು, ಉದ್ಯಮಿಗಳು ಟಾರ್ಗೆಟ್ ಮಾಡಿಕೊಂಡು ಹನಿಟ್ರ್ಯಾಪ್(honey trap)ಮಾಡುತ್ತಿದ್ದ ಪ್ರಭು ಹಿರೇಮಠ ಎನ್ನುವ ಆರೋಪಿ, ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಈ ಕುರಿತು ವಿಡಿಯೋ ಬಿಡುಗಡೆ ಮಾಡಿದ್ದಾನೆ. ಅಜ್ಞಾನ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿ, ಉದ್ಯಮಿ ವಿನೋದ್ ಎಂಬುವರಿಗೆ ಹನಿಟ್ರ್ಯಾಪ್ ಮೂಲಕ ಹಣ ಸುಲಿಗೆ ಮಾಡಲಾಗಿದೆ ಎಂದು ಒಪ್ಪಿಕೊಂಡಿದ್ದಾನೆ.
ಆರ್ ಟಿಜಿಎಸ್ ಮೂಲಕ ತನ್ನ ಅಕೌಂಟ್ ಗೆ 6 ಲಕ್ಷ ರೂಪಾಯಿ, ಮಾವನ ಅಕೌಂಟ್ ಗೆ 8 ಲಕ್ಷ ರೂಪಾಯಿ ಹಾಕಿಸಿಕೊಳ್ಳಲಾಗಿದೆ. ನನ್ನ ಅಕೌಂಟ್ ಗೆ ಬಂದ ಹಣವನ್ನು ರಾಜು ಲೆಂಗಟಿ ಎಂಬಾತ ಡ್ರಾ ಮಾಡಿಕೊಂಡಿದ್ದಾನೆ. ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾದ ಬಳಿಕ ಆರೋಪಿ ಪ್ರಭು ಹಿರೇಮಠ ತನ್ನ ಅಕ್ರಮ ದಂಧೆಯ ಬಗ್ಗೆ ಬಾಯಿಬಿಟ್ಟಿದ್ದಾನೆ.
ತಮಗೆ ಕಷ್ಟವಿದೆ ಎಂದು ಸಹಾಯ ಕೇಳಲು ಬಂದ ಯುವತಿಯರನ್ನು ಗಾಳಕ್ಕೆ ಹಾಕಿಕೊಳ್ಳುತ್ತಿದ್ದರು. ಅವರ ಮೇಲೆ ತಮ್ಮ ಕ್ರೌರ್ಯ ಮೆರೆಯುತ್ತಿದ್ದರು. ನಂತರ ಅವರನ್ನು ಹನಿ ಟ್ರ್ಯಾಪ್ ಗೆ ಬಳಸಿಕೊಳ್ಳುತ್ತಿದ್ದರು. ಸರ್ಕಾರಿ ಅಧಿಕಾರಿಗಳು, ಉದ್ಯಮಿಗಳನ್ನು ಟಾರ್ಗೆಟ್ ಮಾಡುತ್ತಿದ್ದರು. ಯುವತಿಯರ ಮೂಲಕ ಅವರನ್ನು ಲಾಡ್ಜ್ ಗೆ ಕರೆಸುತ್ತಿದ್ದರು. ಅವರು ಅಲ್ಲಿಗೆ ಬಂದಾಗ ಇವರು ಫೋಟೋ, ವಿಡಿಯೋ ತೆಗೆದು ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು. ಸಂತ್ರಸ್ತೆಯರಿಗೂ ಹಣ ಕೊಡದೆ ಯಾಮಾರಿಸುತ್ತಿದ್ದರು. ಇವರ ಗ್ಯಾಂಗ್ ನಲ್ಲಿ ದಲಿತ ಸೇನೆ ರಾಜ್ಯಾಧ್ಯಕ್ಷ ಹಣಮಂತ ಯಾಳಸಂಗಿ, ರಾಜು ಲಂಗಟಿ, ಮಂಜು ಭಂಢಾರಿ, ಸಂತೋಷ್, ಶ್ರೀಕಾಂತ್ ರೆಡ್ಡಿ ಹಾಗೂ ಪ್ರಭು ಹಿರೇಮಠ ಸೇರಿ 8 ಜನರಿದ್ದು, ಇವರ ವಿರುದ್ಧ ಪ್ರಕರಣ ದಾಖಲಾಗಿದೆ.