ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪ್ರಗತಿಯನ್ನು ಗುರಿಯಾಗಿಟ್ಟುಕೊಳ್ಳದೇ ಎಲ್ಲರೂ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿ ಸಮನ್ವಯದಿಂದ ಹಾಗೂ ಯೋಜನಾಬದ್ಧವಾಗಿ ಕಾರ್ಯ ನಿರ್ವಹಿಸುವಂತೆ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ರಿಷಿ ಆನಂದ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ನಗರದ ಜಿಲ್ಲಾ ಪಂಚಾಯತಿಯಲ್ಲಿ ಮಂಗಳವಾರ ನಡೆದ ವಿವಿಧ ಇಲಾಖೆಯ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ವಿಡಿಯೋ ಸಂವಾದದ ಮೂಲಕ ಆಯೋಜಿಸಲಾದ ಸಭೆಯಲ್ಲಿ ಸೂಚನೆ ನೀಡಿದ ಅವರು, ಮನರೇಗಾ, ಸ್ವಚ್ಚ ಭಾರತ ಮಿಷನ್ ಮತ್ತು ವಸತಿ ಯೋಜನೆ ಸೇರಿದಂತೆ ಎಲ್ಲಾ ಯೋಜನೆಗಳಲ್ಲಿ ನಿಯಮಾನುಸಾರ ಪ್ರಗತಿ ಸಾಧಿಸಬೇಕು ಎಂದರು.
ತಾಲೂಕಾ ಪಂಚಾಯತಿಯ ಕಾರ್ಯ ನಿರ್ವಹಣಾಧಿಕಾರಿಗಳು ಹಾಗೂ ಸಂಬಂಧಿಸಿದ ವಿಭಾಗದ ಸಹಾಯಕ ನಿರ್ದೇಶಕರು ಸತತ ಕ್ಷೇತ್ರ ಭೇಟಿ ನೀಡಿ ಸಮರ್ಪಕ ಹಾಗೂ ನಿಗದಿತ ಕಾಲಾವಧಿಯಲ್ಲಿ ಯೋಜನೆಗಳು ಅನುಷ್ಠಾನಗೊಳ್ಳುವ ನಿಟ್ಟಿನಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಸಭೆ ಕರೆದು, ಅಗತ್ಯ ಸಲಹೆ ಸೂಚನೆ ನೀಡಬೇಕು. ಜಿಲ್ಲಾದ್ಯಂತ ಮಳೆಯಾಗುತ್ತಿರುವುದರಿಂದ ಮಳೆ ನೀರು ಹಾಗೂ ಕಲುಷಿತ ನೀರು ಕುಡಿಯುವ ನೀರಿನೊಡನೆ ಸೇರದಂತೆ ಎಚ್ಚರಿಕೆ ವಹಿಸಬೇಕು. ಈ ಬಗ್ಗೆ ನೀರಿನ ಟ್ಯಾಂಕ್ ಗಳನ್ನು ನಿಯಮಿತವಾಗಿ ಸ್ವಚ್ಚಗೊಳಿಸುವುದು ಮತ್ತು ಸ್ವಚ್ಛಗೊಳಿಸಿರುವ ಕುರಿತಾಗಿ ಲಾಗ್ ವಹಿಯನ್ನು ನಿರ್ವಹಣೆ ಮಾಡಬೇಕು. ಹದಿನೈದು ದಿನಗಳಿಗೊಮ್ಮೆ ಕುಡಿಯುವ ನೀರಿನ ಜಲಮೂಲಗಳ ಪರೀಕ್ಷೆ ಮಾಡಬೇಕು. ಕುಡಿಯುವ ನೀರಿನ ಮೂಲಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಗ್ರಾಮಗಳಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು. ಗ್ರಾಮದಲ್ಲಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಮನರೇಗಾ ಯೋಜನೆಯಡಿ ನೈಜ ಫಲಾನುಭವಿಗಳಿಗೆ ನಿರಂತರ ನೂರು ದಿನಗಳವರೆಗೆ ಕೆಲಸ ನೀಡಿ, ಕಾಯಕ ಸಂಘಗಳನ್ನು ಗುರುತಿಸಿ ಅವರಿಗೆ ಮನವೊಲಿಸಿ ಯೋಜನೆಯಡಿ ಭಾಗವಹಿಸುವಂತೆ ಪ್ರೇರಣೆ ನೀಡುವ ಕಾರ್ಯ ಮಾಡಲು ತಿಳಿಸಿದರು. ಕೆಲಸ ಕೇಳಿ ಬರುವ ಮತ್ತು ಸಮಸ್ಯೆ ಹೊತ್ತು ಬರುವ ಸಾರ್ವಜನಿಕರ ಸಮಸ್ಯೆ ಆಲಿಸಬೇಕು. ಅವರ ಸಮಸ್ಯೆಗಳು ನಿಮ್ಮ ಹಂತದಲ್ಲಿಯೇ ಅವುಗಳನ್ನು ಪರಿಹರಿಸಬೇಕು. ಸಾಮಾಜಿಕ ಕಾಳಜಿ ಹೊಂದಿ, ಕಾರ್ಯ ನಿರ್ವಹಿಸಿ, ಗುರಿ ನಿಗದಿಪಡಿಸಿಕೊಂಡು ಕೆಲಸ ಮಾಡಿ, ಪ್ರಗತಿ ಸಾಧಿಸಿ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿಯ ಉಪ ಕಾರ್ಯದರ್ಶಿಗಳು ವಿಜಯಕುಮಾರ ಆಜೂರ, ಮುಖ್ಯ ಲೆಕ್ಕಾಧಿಕಾರಿಗಳ ರಾಮಣ್ಣ ಅಥಣಿ ಮತ್ತು ಮುಖ್ಯ ಯೋಜನಾಧಿಕಾರಿ ಸಿ.ಬಿ.ಕುಂಬಾರ, ಸಭೆಗೆ ಎಲ್ಲಾ ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು ಹಾಗೂ ಗ್ರಾಮ ಪಂಚಾಯತಿಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಜರಿದ್ದರು.