ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಕೊಲೆ ಪ್ರಕರಣದ ಎ2 ಆರೋಪಿಯಾಗಿರುವ ನಟ ದರ್ಶನ್ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಲು ಸರ್ಕಾರ ಸಜ್ಜಾಗಿದೆ. ಈ ಬಗ್ಗೆ ಸ್ವತಃ ಗೃಹ ಸಚಿವರು ಮಾಹಿತಿ ನೀಡಿದ್ದು, ಪೊಲೀಸರ ಪರವಾಗಿ ವಾದ ಮಂಡಿಸಲು ಇಬ್ಬರು ವಕೀಲರನ್ನು ನೇಮಕ ಮಾಡಿದೆ. ಈ ಮೂಲಕ ನಿಯಮಿತ ಜಾಮೀನು ಪಡೆದು ಹೊರಗೆ ಇರುವ ದರ್ಶನಗೆ ಸರ್ಕಾರದಿಂದ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ.
ಈ ಮೊದಲು 6 ವಾರಗಳ ಕಾಲ ಮಧ್ಯಂತರ ಜಾಮೀನು ಪಡೆದಿದ್ದರು. ಬೆನ್ನು ನೋವು ಸಾಕಷ್ಟು ಇದ್ದು, ಆಪರೇಷನ್ ಮಾಡಿಸದಿದ್ದರೆ ಪಾರ್ಶುವಾಯು ಹೊಡೆದು ಬಿಡುತ್ತೆ ಎಂದೆಲ್ಲ ವಕೀಲರು ವಾದ ಮಾಡಿದರು. ಹೀಗಾಗಿ ವೈದ್ಯಕೀಯ ಕಾರಣಕ್ಕೆ 6 ವಾರ ಮಧ್ಯಂತರ ಜಾಮೀನು ಹೈಕೋರ್ಟ್ ನೀಡಿತ್ತು. ಮುಂದೆ ಅದರ ಅವಧಿ ಕೊನೆಯಾಗುವ ಸಮಯದಲ್ಲಿ ನಿಯಮಿತ ಜಾಮೀನು ಸಿಕ್ಕು ಬಿಟ್ಟಿತು. ಇದಾದ ಮೂರು ದಿನಗಳಲ್ಲಿಯೇ ಬಿಜಿಎಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರು. ನಂತರ ಕೋರ್ಟ್ ಗೆ ಮನವಿ ಸಲ್ಲಿಸಿ ತಾಯಿ ಭೇಟಿಗೆ ಮೈಸೂರಿಗೆ ಹೋಗಲು ಅನುಮತಿ ಪಡೆದರು. ಈಗ ಸರ್ಕಾರ ಅವರ ಜಾಮೀನು ರದ್ದತಿಗಾಗಿ ಸುಪ್ರೀಂನಲ್ಲಿ ಮನವಿ ಸಲ್ಲಿಸಲು ಪೊಲೀಸರಿಗೆ ಅಸ್ತು ಎಂದಿದೆ. ಈ ಮೂಲಕ ಡಿ ಟೀಂಗೆ ಮತ್ತೊಂದು ಸಂಕಷ್ಟ ಶುರುವಾಗಲಿದೆ.