ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಕನ್ನಡ ಸೇರಿದಂತೆ ಸೌಥ್ ಸಿನಿ ದುನಿಯಾದಲ್ಲಿ 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಖ್ಯಾತ ನಟಿ ಡಾ.ಲೀಲಾವತಿ ಎಲ್ಲರನ್ನು ಅಗಲಿ ಒಂದು ವರ್ಷವಾಗಿದೆ. ತಾಯಿಯನ್ನು ಕಳೆದುಕೊಂಡಿರುವ ಪುತ್ರ, ನಟ ವಿನೋದ್ ರಾಜ್, ಅವರ ಹೆಸರಿನಲ್ಲಿ ಸ್ಮಾರಕ ನಿರ್ಮಿಸಿದ್ದಾರೆ. ರಂಗ ಮಂದಿರ, ವಸತಿ ನಿಲಯ ಸ್ಥಾಪಿಸಿ ಅವರನ್ನು ಚಿರಸ್ಥಾಯಿಯಾಗಿಡುವ ಕೆಲಸ ಮಾಡಿದ್ದಾರೆ. ಡಿಸೆಂಬರ್ 6, 2024ರಂದು ಲೋಕಾರ್ಪಣಗೊಂಡಿದೆ. ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯಲ್ಲಿ ನೆಲೆ ನಿಂತಿರುವ ಕುಟುಂಬ ಅಲ್ಲಿಯೇ ಇಷ್ಟೆಲ್ಲ ಕೆಲಸ ಮಾಡಿದೆ.
1 ಎಕರೆ ಪ್ರದೇಶದಲ್ಲಿ ತಾಯಿ ಸ್ಮಾರಕವಿದೆ. ಅದಕ್ಕೆ ವರನಟಿ ಡಾ.ಎಂ.ಲೀಲಾವತಿ ದೇಗುಲ ಎಂದ ನಾಮಕರಣ ಮಾಡಿದ್ದಾರೆ. ಇಲ್ಲಿ ಅವರ 62 ಫೋಟೋಗಳನ್ನು ಅಳವಡಿಸಲಾಗಿದೆ. ತಾಯಿ ಆಸೆಯಂತೆ ಚಿಕ್ಕದಾದ ರಂಗ ಮಂದಿರ ನಿರ್ಮಿಸಿದ್ದಾರೆ. ಒಂದೆರಡು ದಿನ ಇರಬೇಕು ಎನ್ನುವವರಿಗೆ ಎರಡು ಕೊಠಡಿಗಳ ವ್ಯವಸ್ಥೆ. ಊಟದ ಕೋಣೆಯಿದ್ದು, ಮುಂಜಾನೆ 10ರಿಂದ ಸಂಜೆ 4ರ ತನಕ ನಿತ್ಯ ಊಟದ ವ್ಯವಸ್ಥೆ ಇರುತ್ತೆ ಎಂದಿದ್ದಾರೆ.
ಚಿತ್ರರಂಗದಿಂದ ದೂರು ಉಳಿದ ಮೇಲೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ದಿವಂಗತ ಲೀಲಾವತಿಯವರು ಪ್ರಾಥಮಿಕ ಆರೋಗ್ಯ ಕೇಂದ್ರ, ಪಶು ಆಸ್ಪತ್ರೆ ನಿರ್ಮಿಸಿ ಈ ಭಾಗದ ಜನರಿಗೆ ಅರ್ಪಿಸಿದ್ದಾರೆ. ಹೀಗೆ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡಿಕೊಂಡು ಬರಲಾಗುತ್ತಿದೆ. ಜೀವಮಾನ ಸಾಧನೆಗಾಗಿ ರಾಜ್ಯ ಸರ್ಕಾರದಿಂದ 1991-2000ರಲ್ಲಿ ಡಾ.ರಾಜ್ ಕುಮಾರ್ ಪ್ರಶಸ್ತಿ, 2008ರಲ್ಲಿ ತುಮಕೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ನೀಡಿ ಲೀಲಾವತಿಯವರನ್ನು ಗೌರವಿಸಲಾಗಿದೆ.