ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿಯಾಗಿ ಬಹುಭಾಷಾ ನಟಿ ತಮನ್ನಾ ಭಾಟಿಯಾರನ್ನು ನೇಮಕ ಮಾಡಲಾಗಿದೆ. ಇದಕ್ಕಾಗಿ ಅವರಿಗೆ 2 ವರ್ಷ 2 ದಿನಕ್ಕೆ 6.20 ಕೋಟಿ ಸಂಭಾವನೆ ನೀಡಲಾಗುತ್ತಿದೆ. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಸಾಮಾಜಿಕ ಮಾಧ್ಯಮ ಸೇರಿದಂತೆ ಎಲ್ಲೆಡೆ ವಿರೋಧ ವ್ಯಕ್ತವಾಗಿದೆ. ಬೃಹತ್ ಕೈಗಾರಿಕೋದ್ಯಮ ಸಚಿವ ಎಂ.ಬಿ ಪಾಟೀಲ ಅವರು ಇದಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ. ಮೈಸೂರು ಸ್ಯಾಂಡಲ್ ಸೋಪ್ ರಾಜ್ಯದಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಹೊರ ರಾಜ್ಯಗಳಲ್ಲಿ ಇನ್ನಷ್ಟು ಪ್ರಸಿದ್ಧಿ ಪಡೆಯಲು ಈ ನಿರ್ಧಾರ ಮಾಡಲಾಗಿದೆ ಎಂದಿದ್ದಾರೆ.
ಈ ಬಗ್ಗೆ ಎಕ್ಸ್ ನಲ್ಲಿ ಬರೆದಿರುವ ಅವರು, 2028ರೊಳಗೆ ಕೆಎಸ್ ಡಿಎಲ್ ವಾರ್ಷಿಕ ಆದಾಯ 5 ಸಾವಿರ ಕೋಟಿ ಮೀರುವ ಗುರಿಯನ್ನು ಹೊಂದಲಾಗಿದೆ. ಮಾರುಕಟ್ಟೆ ಪರಿಣಿತರನ್ನು ಸಂಪರ್ಕಿಸಿ, ಚರ್ಚಿಸಿ ಮಾರುಕಟ್ಟೆ ವಿಸ್ತರಣೆ ಸಂಬಂಧ ರಾಯಭಾರಿ ಮಾನದಂಡಗಳನ್ನು ಗುರುತಿಸಿದೆ. ಕನ್ನಡ ಚಿತ್ರೋದ್ಯಮದ ಬಗ್ಗೆ ನಮಗೆ ಅಪಾರ ಗೌರವಿದೆ. ಬಾಲಿವುಡ್ ಗೂ ಸ್ಪರ್ಧೆ ಒಡ್ಡುವ ಚಿತ್ರಗಳು ನಮ್ಮಲ್ಲಿ ಬರುತ್ತಿವೆ. ನಮ್ಮ ಉತ್ಪನ್ನ ಬಳಕೆ ಮಾಡುವವರನ್ನು ಗುರಿಯಾಗಿಸಿಕೊಂಡು ಹೆಚ್ಚು ಇಷ್ಟಪಡುವ ನಟಿಯನ್ನು ಆಯ್ಕೆ ಮಾಡಿ, ಮಾರುಕಟ್ಟೆಗೆ ಸೂಕ್ತ ಆಗುವವರನ್ನು ಆಯ್ಕೆ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.