ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ನಟ ದರ್ಶನ್ ರೆಗ್ಯೂಲರ್ ಜಾಮೀನು ಅರ್ಜಿಯ ವಿಚಾರಣೆ ನವೆಂಬರ್ 28 ಹಾಗೂ 29ರಂದು ಎರಡು ದಿನಗಳ ಕಾಲ ಹೈಕೋರ್ಟ್ ನಲ್ಲಿ ನಡೆಯಿತು. ದರ್ಶನ್ ಪರ ಹಿರಿಯ ವಕೀಲ ಸಿ.ವಿ ನಾಗೇಶ್ ವಾದ ಮಂಡಿಸಿದರು. ರೇಣುಕಾಸ್ವಾಮಿ ಕೊಲೆ ಪಟ್ಟಣಗೆರೆ ಶೆಡ್ ನಲ್ಲಿಯೇ ನಡೆದಿದೆ ಎನ್ನುವುದಕ್ಕೆ ಸಾಕ್ಷಿಗಳ ಹೇಳಿಕೆಯಲ್ಲಿ ಈ ಬಗ್ಗೆ ಒಂದೇ ಒಂದು ಪದವಿಲ್ಲ. ಕೊಲೆ ಹಾಗೂ ಪಿತೂರಿಗೆ ಯಾವುದೇ ಉದ್ದೇಶವಿರಲಿಲ್ಲ. ಆತನಿಗೆ ಊಟ ಕೊಟ್ಟು, ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ದರ್ಶನ್ ಹೇಳಿದ್ದರು ಎನ್ನುವ ವಿಚಾರ ಎತ್ತಲಾಗಿದೆ. ಒಂದು ವೇಳೆ ಕೊಲೆ ಮಾಡುವ ಉದ್ದೇಶ ಇದ್ದಿದ್ದರೆ ಈ ರೀತಿ ಹೇಳಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
ಮೃತದೇಹ ಕೋಲ್ಡ್ ಸ್ಟೋರೇಜ್ ನಲ್ಲಿ ಇಟ್ಟಿದ್ದರಿಂದ ನಿಖರವಾಗಿ ಸಾವಿನ ಸಮಯ ಹೇಳಲು ಆಗಿಲ್ಲ. ಫೋಟೋ ನೋಡಿ ಸಮಯ ಅಂದಾಜಿಸಲಾಗಿದೆ. ಜಪ್ತಿ ಮಾಡಿದ ವಸ್ತುಗಳ ಎಫ್ಎಸ್ಎಲ್ ವರದಿ ವಿರುದ್ಧವಾಗಿದೆ. ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆ ದಾಖಲು ವಿಳಂಬವಾಗಿದೆ. ಬಹುತೇಕ ಆರೋಪಿಗಳಿಗೆ ಅಪರಾಧಿ ಹಿನ್ನಲೆ ಇಲ್ಲ ಎನ್ನುವುದು ಸೇರಿದಂತೆ ಹಲವು ವಿಚಾರಗಳ ಕುರಿತು ನ್ಯಾಯಾಲಯಕ್ಕೆ ನಟ ದರ್ಶನ್ ಪರ ವಕೀಲರು, ದರ್ಶನ್ ಮ್ಯಾನೇಜರ್ ನಾಗರಾಜ್ ಪರ ವಕೀಲರಾದ ಸಂದೇಶ್ ಚೌಟ್ ವಾದ ಮಂಡಿಸಿ ಜಾಮೀನು ನೀಡಬಹುದು ಎಂದು ಮನವಿ ಮಾಡಿದರು.
ಇನ್ನು ಎ1 ಆರೋಪಿ ಪವಿತ್ರಾಗೌಡ ಜಾಮೀನು ಅರ್ಜಿಯ ವಿಚಾರಣೆ ನಡೆಯಬೇಕಿದೆ. ಇದಾದ ಬಳಿಕ ಪ್ರಾಸಿಕ್ಯೂಷನ್ ಪರ ವಕೀಲರ ವಾದ ಸಹ ಮಾಡಬೇಕಿದೆ. ಹೀಗಾಗಿ ಡಿಸೆಂಬರ್ 3ಕ್ಕೆ ವಿಚಾರಣೆಯನ್ನು ಮುಂದೂಡಿಕೆ ಮಾಡಲಾಗಿದೆ. ಸಧ್ಯ ನಟ ದರ್ಶನ್ ವೈದ್ಯಕೀಯ ಕಾರಣಕ್ಕೆ ಮಧ್ಯಂತರ ಜಾಮೀನಿನ ಮೇಲೆ ಹೊರಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.