ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ವರುಣನ ಆರ್ಭಟ ಜೋರಾಗಿದ್ದು ಮಂಗಳವಾರ ಮಧ್ಯಾಹ್ನದಿಂದಲೇ ಅಬ್ಬರಿಸಿದ್ದಾನೆ. ಕಳೆದ ಎರಡ್ಮೂರು ದಿನಗಳಿಂದ ರಾತ್ರಿ ಸಮಯದಲ್ಲಿ ಬರುತ್ತಿದ್ದ ಮಳೆ ಮಂಗಳವಾರ ಮಧ್ಯಾಹ್ನವೇ ತೀವ್ರವಾಗಿ ಸುರಿದಿದೆ. ಇದರ ಪರಿಣಾಮ ಇಡೀ ಪಟ್ಟಣದ ತುಂಬ ಎಲ್ಲಿ ನೋಡಿದರೂ ಕೊಳಚೆ ನೀರು ಹರಿಯುತ್ತಿದೆ. ಊರು ಸ್ವಚ್ಛಗೊಳಿಸುವ ಪುರಸಭೆ ಕಚೇರಿಗೇ ಕೊಳಚೆ ನೀರು ನುಗ್ಗಿದ್ದು, ಅಧಿಕಾರಿಗಳು, ಸಿಬ್ಬಂದಿ, ವಾರ್ಡ್ ಸದಸ್ಯರ ಬೇಜವಾಬ್ದಾರಿಗೆ ಹಿಡಿದ ಕೈಗನ್ನಡಿಯಾಗಿದೆ.
ಪುರಸಭೆಯೊಳಗೆ ಕೊಳಚೆ ನೀರು ನುಗ್ಗಿದ ಪರಿಣಾಮ ಸಾರ್ವಜನಿಕರು ಪಡಬಾರದು ಪಾಡು ಪಟ್ಟರು. ಸಾಲದು ಅಂತು ಮುಂದಿನ ಬೃಹತ್ ಚರಂಡಿ ಸಹ ತುಂಬಿಕೊಂಡು ಸುತ್ತಮುತ್ತಲಿನ ಅಂಗಡಿಗಳಿಗೂ ನೀರು ನುಗ್ಗಿದೆ. ಇನ್ನು ವಿವೇಕಾನಂದ ವೃತ್ತ, ಬಸ್ ನಿಲ್ದಾಣ ಸುತ್ತಲಿನ ಪ್ರದೇಶ ಸೇರಿದಂತೆ 23 ವಾರ್ಡ್ ಗಳಲ್ಲಿ ಒಂದೇ ಒಂದು ವಾರ್ಡ್ ಸ್ವಚ್ಛವಾಗಿದೆ ಎಂದು ಹೇಳುವ ಹಾಗಿಲ್ಲ. ಊರು ತುಂಬ ರಸ್ತೆ ಅಗೆದು ಹಾಗೇ ಬಿಡಲಾಗಿದೆ. ಒಳಚರಂಡಿ ಕೆಲಸ ಕುಂಟುತ್ತಾ ಪಟ್ಟಣವನ್ನು ಹೊಳುಕೊಂಪೆ ರೀತಿ ಮಾಡುತ್ತಿದೆ. ಅಧ್ಯಕ್ಷರನ್ನು ಬದಲಾಯಿಸಲು ಓಡಾಡುವ ಸದಸ್ಯರು ತಮ್ಮ ವಾರ್ಡ್ ಜನರ ಸಮಸ್ಯೆ ಎಂದರೆ ಕೈಗೆ ಸಿಗುವುದಿಲ್ಲವೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಮಳೆಗಾಲ ಈಗ ಶುರುವಾಗುತ್ತಿದೆ. ಆಗಲೇ ಹಲವು ವ್ಯಾಪಾರಸ್ಥರು ಲಕ್ಷಾಂತರ ರೂಪಾಯಿ ಹಾನಿ ಅನುಭವಿಸಿದ್ದಾರೆ. ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೂ ನೀರು ನುಗ್ಗಿದ್ದು ಸ್ಥಳೀಯರು ಆಯಾ ವಾರ್ಡ್ ಸದಸ್ಯರ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ. ಪ್ರತಿ ವರ್ಷ ಸಿಂದಗಿಯಲ್ಲಿ ಇದೇ ಪರಿಸ್ಥಿತಿ ಇದ್ದು, ಶಾಶ್ವತ ಪರಿಹಾರವಿಲ್ಲದೆ ಹೈರಾಣಾಗುತ್ತಿರುವುದು ಮಾತ್ರ ಸತ್ಯ.