ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): 12ನೇ ಶತಮಾನದ ಅಗ್ರಗಣ್ಯ ಶರಣರಲ್ಲಿ ಅಂಬಿಗರ ಚೌಡಯ್ಯನವರು ಒಬ್ಬರು. ಅಣ್ಣ ಬಸವಣ್ಣನವರಿಂದ ನಿಜ ಶರಣೆಂದು ಕರೆಸಿಕೊಂಡವರು. ಮೌಢ್ಯದ ವಿರುದ್ಧ ತೀಕ್ಷಣವಾಗಿ ವಚನಗಳನ್ನು ಬರೆದವರು. ತಮ್ಮ ಹೆಸರನ್ನೇ ಅಂಕಿತನಾಮವಾಗಿ ಇಟ್ಟುಕೊಳ್ಳುವ ಮೂಲಕ ಬಂಡಾಯದ ಕಹಳೆ ಊದಿದವರು. ಆದರೆ, ಇಂತಹ ಶರಣರ ಜಯಂತಿಯನ್ನು ಪಟ್ಟಣದಲ್ಲಿ ಅತ್ಯಂತ ಸರಳವಾಗಿ ಆಚರಿಸಲಾಗಿದೆ. ಇದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಯಾಕೆ ಸರಳ ಹಾಗೂ ಸಂಕ್ಷಿಪ್ತವಾಗಿ ಅಂಬಿಗರ ಚೌಡಯ್ಯ ಜಯಂತಿ ಆಚರಿಸಲಾಯಿತು ಎನ್ನುವ ಪ್ರಶ್ನೆ ಹಲವರಲ್ಲಿ ಮೂಡಿದೆ.
ಪಟ್ಟಣದಲ್ಲಿರುವ ಅಂಬಿಗರ ಚೌಡಯ್ಯನ ವೃತ್ತದಲ್ಲಿನ ಮೂರ್ತಿಗೆ ಗೌರವ ಸಲ್ಲಿಸಿದ ಬಳಿಕ, ತಾಲೂಕು ಆಡಳಿತ ಕಚೇರಿಯಲ್ಲಿ ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಹಾಗೂ ವಿವಿಧ ಸಮಾಜದ ಮುಖಂಡರ ನೇತೃತ್ವದಲ್ಲಿ ಫೋಟೋ ಪೂಜೆ ನೆರವೇರಿಸುವ ಮೂಲಕ ಜಯಂತಿ ಆಚರಿಸಲಾಯಿತು. ಈ ವೇಳೆ ಸಮಾಜದ ಅಧ್ಯಕ್ಷರು ಯಾರು? ಎಲ್ಲಿ ಎನ್ನುವ ಮಾಧ್ಯಮದವರ ಪ್ರಶ್ನೆಗೆ, ಅಧ್ಯಕ್ಷರು ಯಾರು ಎನ್ನುವ ಸ್ಪಷ್ಟತೆ ಇಲ್ಲ ಎಂದು ಮುಖಂಡರೊಬ್ಬರು ಹೇಳಿದರು. ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ವೈ.ಸಿ ಮಯೂರ, ಸರ್ಕಾರಿ ಆಸ್ಪತ್ರೆಯ ಲ್ಯಾಬ್ ಟೆಕ್ನಿಷಿಯನ್, ಸಾಮಜದ ಮುಖಂಡರಾದ ರಾಜು ನರಗೋದಿ, ವಕೀಲರು ಹಾಗೂ ಸಮಾಜದ ಮುಖಂಡರಾದ ಮಲ್ಲು ಘತ್ತರಗಿ, ಗ್ರೇಡ್-2 ತಹಶೀಲ್ದಾರ್ ಇಂದಿರಾಬಾಯಿ ಬಳಗಾನೂರ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಶೋಕ ತೆಲ್ಲೂರು ಮಾತನಾಡಿ, ಶರಣರನ್ನು ಒಂದು ಜಾತಿಗೆ ಸೀಮಿತ ಮಾಡದೆ ಸಮ ಸಮಾಜಕ್ಕೆ ಹೋರಾಡಿದ ಎಲ್ಲರ ಆದರ್ಶಗಳನ್ನು ಮೈಗೂಡಿಸಿಕೊಳ್ಳೋಣ ಎಂದರು.
ಈ ವೇಳೆ ಕಸಾಪ ಮಾಜಿ ಅಧ್ಯಕ್ಷ ಚಂದ್ರಶೇಖರ ದೇವರೆಡ್ಡಿ, ಬಿ.ಎಂ ಬಿರಾದಾರ, ನಾಗು ತಳವಾರ, ಭಾಗಪ್ಪ ನರಗೋದಿ, ಕಂದಾಯ ನಿರೀಕ್ಷಿಕ ಐ.ಎ ಮಕಾಂದಾರ, ತಾಲೂಕು ಆಡಳಿತ ಸಿಬ್ಬಂದಿಯಾದ ಸೋಮನಾಯ್ಕ, ಸಂತೋಷ ವಾಲೀಕಾರ ಸೇರಿದಂತೆ ಇತರರು ಉಪಸ್ಥಿತರಿದ್ದರು. ಎಲ್ಲ ಸಮುದಾಯಕ್ಕೆ ಬೇಕಾದ ಶರಣರ ಜಯಂತಿಯನ್ನು ಆ ಸಮುದಾಯದವರೆ ಅರ್ಥಪೂರ್ಣವಾಗಿ ಆಚರಣೆ ಮಾಡದೆ ಇರುವುದು ಬೇಸರ ಹಾಗೂ ನೋವಿನ ಸಂಗತಿ ಎಂದು ಕಾರ್ಯಕ್ರಮ ಮುಗಿದ ಬಳಿಕ ಕೆಲ ಮುಖಂಡರು ಮಾತನಾಡಿದರು.