ಪ್ರಜಾಸ್ತ್ರ ಸುದ್ದಿ
ಭಟ್ಕಳ(Bhatkal): ಶಾಲೆಯ ಶೈಕ್ಷಣಿಕ ಪ್ರವಾಸಕ್ಕೆಂದು ಬಂದಿದ್ದ ವಿದ್ಯಾರ್ಥಿಯೊಬ್ಬ ಬಾವಿಗೆ ಬಿದ್ದು ಮೃತಪಟ್ಟ ದುರಂತ ಬುಧವಾರ ಸಂಜೆ ಭಟ್ಕಳದಲ್ಲಿ ನಡೆದಿದೆ. ಕೊಪ್ಪಳ ಜಿಲ್ಲೆ ಯಲಬುರ್ಗ ತಾಲೂಕಿನ ಗಾಣದಾಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 8ನೇ ತರಗತಿ ವಿದ್ಯಾರ್ಥಿ ನಿರುಪಾದಿ ದುರ್ಗಪ್ಪ ಹರಿಜನ ಮೃತ ದುರ್ದೈವಿ ಬಾಲಕ. ತಾಲೂಕು ಪಂಚಾಯ್ತಿ ಹತ್ತಿರದ ಮೆಡಿಕಲ್ ಶಾಪ್ ಗೆ ಬಂದಿದ್ದ ವಿದ್ಯಾರ್ಥಿ ಮೂತ್ರವಿಸರ್ಜನೆಗೆಂದು ಹೋದಾಗ ತಡೆಗೋಡೆ ಇಲ್ಲದ ಬಾವಿಗೆ ಬಿದ್ದಿದ್ದಾನೆ.
ಸ್ಥಳೀಯರು, ಅಗ್ನಿಶಾಮಕ ಸಿಬ್ಬಂದಿ ಬಾಲಕನನ್ನು ಮೇಲೆತ್ತಿ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. 100 ವಿದ್ಯಾರ್ಥಿಗಳು, 13 ಶಿಕ್ಷಕರೊಂದಿಗೆ 2 ಬಸ್ ಗಳಲ್ಲಿ ಪ್ರವಾಸಕ್ಕೆ ಬಂದಿದ್ದಾರೆ. ಅರಬೈಲ್ ಘಟ್ಟದ ಮಾರ್ಗವಾಗಿ ಕೊಲ್ಲೂರಿಗೆ ಹೊರಟಿದ್ದರು. ದಾರಿಮಧ್ಯ ಮಾತ್ರೆ ತರಲು ಭಟ್ಕಳದಲ್ಲಿ ಬಸ್ ನಿಲ್ಲಿಸಲಾಗಿದೆ. ಆಗ ವಿದ್ಯಾರ್ಥಿ ಮೂತ್ರವಿಸರ್ಜನೆಗೆಂದು ಹೋಗಿದ್ದಾಗ ಗೊತ್ತಾಗದೆ ತಡೆಗೋಡೆ ಇಲ್ಲದ ಬಾವಿಗೆ ಬಿದಿದ್ದಾನೆ. ಮಗನನ್ನು ಕಳೆದುಕೊಂಡ ಕುಟುಂಬಸ್ಥರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಇತ್ತೀಚೆಗೆ ಮುರುಡೇಶ್ವರ ಬೀಚ್ ನಲ್ಲಿ ನಾಲ್ವರು ವಿದ್ಯಾರ್ಥಿನಿಯರು ಮೃತಪಟ್ಟಿರುವ ದುರಂತ ಮಾಸುವ ಮುನ್ನವೇ ಮತ್ತೊಂದು ಜೀವ ಹೋಗಿದೆ.