ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belagavi): ಬೆಳಗಾವಿಯನ್ನು ಆಡಳಿತಾತ್ಮಕ ಮತ್ತು ಅಭಿವೃದ್ಧಿ ಹಿತದೃಷ್ಟಿಯಿಂದ ವಿಭಜಿಸಿ ಚಿಕ್ಕೋಡಿ ಮತ್ತು ಗೋಕಾಕ ಜಿಲ್ಲೆಗಳನ್ನಾಗಿ ರಚಿಸುವಂತೆ ವಿವಿಧ ಮಠಾಧೀಶರು, ಗೋಕಾಕ ಜಿಲ್ಲಾ ಹೋರಾಟ ಚಾಲನಾ ಸಮಿತಿ ನಿಯೋಗ ಹಾಗೂ ಜನಪ್ರತಿನಿಧಿಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇಲ್ಲಿನ ಸರ್ಕ್ಯೂಟ್ ಹೌಸ್‌ನಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದರು.
ಬೆಳಗಾವಿ ಜಿಲ್ಲೆ ವಿಭಜಿಸಿ ಚಿಕ್ಕೋಡಿ ಮತ್ತು ಗೋಕಾಕ ಜಿಲ್ಲೆಗಳನ್ನು ರಚಿಸಲು ಈಗಾಗಲೇ ಆಯೋಗಗಳು ಶಿಫಾರಸು ಮಾಡಿರುವುದನ್ನು ಮನವಿ ವೇಳೆ ತಿಳಿಸಲಾಯಿತು. ಚಿಕ್ಕೋಡಿ ಮತ್ತು ಗೋಕಾಕ ನಗರವನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಈ ಸಂಬಂಧ ಜಿಲ್ಲೆಯ 18 ಶಾಸಕರನ್ನು ಕರೆದು ಅವರ ಅಭಿಪ್ರಾಯ ಪಡೆದು ಶೀಘ್ರ ನಿರ್ಣಯ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಭರವಸೆಯನ್ನು ನೀಡಿದರು.
ಈ ವೇಳೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಕಾನೂನು ಸಚಿವ ಎಚ್.ಕೆ ಪಾಟೀಲ, ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ ಮಹಾದೇವಪ್ಪ ಸೇರಿದಂತೆ ವಿವಿಧ ಮಠಾಧೀಶರು, ಮುಖಂಡರು ಉಪಸ್ಥಿತರಿದ್ದರು.




