ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಪೀರಾಪೂರ-ಬೂದಿಹಾಳ ಏತ ನೀರಾವರಿ ಯೋಜನೆಯ ಕಾಮಗಾರಿ ಶೀಘ್ರ ಪೂರ್ಣಗೊಳಿಸುವ ಸಂಬಂಧ ಶನಿವಾರ ರೈತರು, ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಬಿ ಪಾಟೀಲರಿಗೆ ಮನವಿ ಸಲ್ಲಿಸಿದರು. ಪೀರಾಪೂರ-ಬೂದಿಹಾಳ ನೀರಾವರಿ ಕ್ರಿಯಾಶೀಲ ವೇದಿಕೆ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ಕನ್ನಡಪರ ಸಂಘಟನೆ, ವಾಲ್ಮೀಕಿ ಸಂಘಟನೆಯ ಸುಮಾರು 200ಕ್ಕೂ ಹೆಚ್ಚು ಜನರು ಭಾಗವಹಿಸಿ ಸಚಿವರ ಗೃಹ ಕಚೇರಿಯಲ್ಲಿ ಮನವಿ ಪತ್ರ ಸಲ್ಲಿಸಿದರು. ಈ ಮೂಲಕ ಈ ಯೋಜನೆಗೆ ಒಳಪಡುವ 38 ಗ್ರಾಮಗಳ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಕೇಳಿಕೊಂಡರು.
ಜಿಲ್ಲೆಯ ತಾಳಿಕೋಟೆ, ದೇವರ ಹಿಪ್ಪರಗಿ ತಾಲೂಕಿನ 38 ಗ್ರಾಮಗಳು ಪೀರಾಪೂರ-ಬೂದಿಹಾಳ ಏತ ನೀರಾವರಿ ಯೋಜನೆಗೆ ಒಳಪಡುತ್ತಿವೆ. ಈಗಾಗ್ಲೇ ಕಾಮಗಾರಿ ಶೇಕಡ 90ರಷ್ಟು ಪೂರ್ಣಗೊಂಡಿದೆ. ಇನ್ನುಳಿದ ಬಾಕಿ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು. 2025-26ನೇ ಸಾಲಿನ ಬಜೆಟ್ ನಲ್ಲಿ ಅನುಮೋದನೆ ಕೊಡಿಸಿ ಕಾರ್ಯರೂಪಕ್ಕೆ ತಂದರೆ ಈ ಭಾಗದ ರೈತರಿಗೆ ಅನುಕೂಲವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲರಲ್ಲಿ ಮನವಿ ಮಾಡಿಕೊಳ್ಳಲಾಗಿದೆ.
ಈ ವೇಳೆ ರೈತರೊಂದಿಗೆ ಮಾತನಾಡಿದ ಸಚಿವರು, ಪೀರಾಪೂರ-ಬೂದಿಹಾಳ ಏತ ನೀರಾವರಿ ಯೋಜನೆ ನಮ್ಮ ಸರ್ಕಾರ ಇದ್ದಾಗಲೇ ಜಾರಿಗೆ ತರಲಾಗಿದೆ. ಅದನ್ನು ನಾವೇ ಪೂರ್ಣಗೊಳಿಸಿ ಕೊಡುತ್ತೇವೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವರಾದ ಡಿ.ಕೆ ಶಿವಕುಮಾರ್ ಅವರ ಜೊತೆಗೆ ಚರ್ಚಿಸುತ್ತೇನೆ. ಬಜೆಟ್ ನಲ್ಲಿ ಈ ವಿಚಾರ ಪ್ರಸ್ತಾಪಿಸುವ ಮೂಲಕ ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎನ್ನುವ ಭರವಸೆಯನ್ನು ರೈತರಿಗೆ ನೀಡಿದ್ದಾರೆ.
ಈ ವೇಳೆ ಸಾಹೇಬಗೌಡ ಯಾಳಗಿ(ನೀರಲಗಿ), ಎಸ್.ಸಿ ನಾಗರೆಡ್ಡಿ, ಹೆಚ್.ಎನ್ ಬಿರಾದಾರ, ಕೆ.ಎಂ ತಳವಾರ, ಶಿವಪುತ್ರ ಚೌಧರಿ(ನೀರಲಗಿ), ಗುರುರಾಜ ಎಂ.ಪಡಶೆಟ್ಟಿ ಡಾ.ಪ್ರಭುಗೌಡ ಬಿರಾದಾರ, ಕರ್ನಾಟಕ ರಾಜ್ಯ ರೈತ ಸಂಘದ ಗ್ರಾಮಾಧ್ಯಕ್ಷ ಸಂಗನಗೌಡ ಬಿರಾದಾರ, ಕರವೇ ಬಸು ನಾಯ್ಕೋಡಿ, ವಾಲ್ಮೀಕಿ ಸಂಘದ ಮುಖಂಡ ದೇವೇಂದ್ರ ನಾವದಗಿ, ರಾಯಪ್ಪಗೌಡ ಪಾಟೀಲ, ಪಿ.ಎಸ್ ಪಾಟೀಲ, ಆರ್.ಬಿ ವಡ್ಡೊಡಗಿ, ಜಿ.ಬಿ ಬಿರಾದಾರ, ಪಿ.ವೈ ವಾಲಿಕಾರ, ಎಸ್.ವೈ ವಾಲಿಕಾರ, ಆರ್.ಎಂ ಯಾಳಗಿ, ಬಿ.ಜಿ ಪಾಟೀಲ, ಶಿವನಗೌಡ ಚೌಧರಿ, ಆನಂದ ಸಾಸನೂರ, ಚಂದ್ರಶೇಖರ ಅಲ್ದಿ, ಸಂತೋಷ ಸಾಸನೂರ, ಈರಣ್ಣ ಸಿಂಪಗೇರ, ಮಡಿವಾಳ ನಾಯ್ಕೋಡಿ, ಮಡಿವಾಳ ಕಟ್ಟಿಮನಿ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.