ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಕೇಂದ್ರದ ಗೃಹ ಸಚಿವ ಅಮಿತ್ ಶಾ ಹಾಗೂ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಶೇಖರ್ ಯಾದವ್ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ, ಮಂಗಳವಾರ ಟಿಪ್ಪು ಕ್ರಾಂತಿ ಸೇನೆಯಿಂದ ಪ್ರತಿಭಟನೆ ನಡೆಸಲಾಯಿತು. ಪಟ್ಟಣದಲ್ಲಿನ ತಾಲೂಕು ಆಡಳಿತ ಕಚೇರಿ ಮುಂಭಾಗದಲ್ಲಿ ಸೇರಿದ ಮುಖಂಡರು, ಅಂಬೇಡ್ಕರ್ ಅವರ ಬಗ್ಗೆ ಅಗೌರವದಿಂದ ಮಾತನಾಡಿರುವುದನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಟಿಪ್ಪು ಕ್ರಾಂತಿ ಸೇನೆ ಸಂಸ್ಥಾಪಕ ದಸ್ತಗೀರ ಮುಲ್ಲಾ, ಭಾರತದ ಪವಿತ್ರ ಸ್ಥಾನವಾದ ಸಂಸತ್ತಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಎನ್ನುವುದು ಈಗ ವ್ಯಸನವಾಗಿದೆ ಎನ್ನುವ ಮೂಲಕ ಮೂಲನಿವಾಸಿಗಳ ಗೌರವಕ್ಕೆ ದಕ್ಕೆ ತಂದಿದ್ದಾರೆ ಎಂದು ಹೇಳಿದರು. ಈ ಪ್ರಕರಣದಲ್ಲಿ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಹಾಗೂ ಸಂಪುಟದಿಂದ ಕೈ ಬಿಡುಗೇಕು. ಇನ್ನು ಅಲಹಾಬಾದನ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಶೇಖರ್ ಯಾದವ್ ಖಾಸಗಿ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿ, ಧಾರ್ಮಿಕ ಅಲ್ಪಸಂಖ್ಯಾತರಾದ ಮುಸ್ಲಿಮರ ಭಾವನೆಗಳಿಗೆ ದಕ್ಕೆ ತರುವಂತ ಕೆಲಸ ಮಾಡಿದ್ದಾರೆ. ಈ ದೇಶ ಬಹುಸಂಖ್ಯಾತರ ಆಸೆಯಂತೆ ನಡೆಯಬೇಕು ಎಂದು ಅಸಂವಿಧಾನಿಕ ಹೇಳಿಕೆ ನೀಡುವುದರ ಮೂಲಕ ಸಂವಿಧಾನಕ್ಕೆ ಹಾಗೂ ಭಾರತೀಯರಿಗೆ ಅಗೌರವ ತೋರಿದ್ದಾರೆ. ಇವರ ಮೇಲೆ ಸಹ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಉತ್ತರ ಕರ್ನಾಟಕ ವಿಭಾಗದ ಅಧ್ಯಕ್ಷ ರಜಾಕ್ ನಾಟಿಕಾರ, ವಿದ್ಯಾರ್ಥಿ ಘಟಕದ ಅಧ್ಯಕ್ಷ ಆಸೀಫ್ ಇಂಡಿಕರ್, ನಗರ ಘಟಕ ಅಧ್ಯಕ್ಷ ಇಮ್ರಾನ್ ಬಾಗವಾನ, ಸಾಜೀದ್ ಮುಲ್ಲಾ ಹಾಗೂ ಸಿಂದಗಿ ತಾಲ್ಲೂಕಿನ ಪದಾಧಿಕಾರಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.