ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಸಚಿವ ದಿನೇಶ್ ಗುಂಡೂರಾವ್ ವಿರುದ್ಧ ಟೀಕೆ ಮಾಡುವ ಸಂದರ್ಭದಲ್ಲಿ ಅವರ ಮನೆಯಲ್ಲಿ ಅರ್ಧ ಪಾಕಿಸ್ತಾನವಿದೆ ಎಂದು ಹೇಳಿದ್ದ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ(Basangouda Patil Yatnal) ಯತ್ನಾಳ ವಿರುದ್ಧ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶ ಎಂ.ನಾಗಪ್ರಸನ್ನ ಅವರಿದ್ದ ಪೀಠ, ಪತ್ನಿ ಮುಸ್ಲಿಂ ಆದ ಮಾತ್ರ ಅರ್ಧ ಪಾಕಿಸ್ತಾನ ಅಂದೆಲ್ಲ ಹೇಳಬಾರದು. ತಲೆಗೆ ಬಂದಿದ್ದೆಲ್ಲ ಯಾಕೆ ಮಾತನಾಡುತ್ತಾರೆ ಎಂದು ಗರಂ ಆಗಿದೆ.
ಸಚಿವ ದಿನೇಶ್ ಗುಂಡೂರಾವ್ ಪತ್ನಿ ತಬಸುಮ್ ರಾವ್(Tabassum Dinesh Gundu Rao) ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆ ಅರ್ಜಿಯನ್ನು ರದ್ದುಗೊಳಿಸಬೇಕೆಂದು ಯತ್ನಾಳ ಅವರು ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು. ಯತ್ನಾಳ ಪರ ವಾದ ಮಂಡಿಸಿದ ವಕೀಲರು ಅರ್ಧ ಪಾಕಿಸ್ತಾನ ಎಂದು ಆ ಅರ್ಥದಲ್ಲಿ ಹೇಳಿಲ್ಲ. ದಿನೇಶ್ ಗುಂಡೂರಾವ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದು ಎಂದರು.
ಚುನಾವಣೆ ಸಂದರ್ಭದಲ್ಲಿ ಪರಸ್ಪರ ಕೆಸರೆರಚಾಟ ನಡೆಸುವುದು ಬಿಡಬೇಕು. ಪತ್ನಿ ಮುಸ್ಲಿಂ ಆಗಿದ್ದರೆಂದು ಅರ್ಧ ಪಾಕಿಸ್ತಾನ ಎಂದು ಹೇಳಬಾರದು. ಪ್ರಕ್ರಿಯೆಯಲ್ಲಿ ಲೋಪವಿರುವುದರಿಂದ ಪ್ರಕರಣವನ್ನು ವಿಚಾರಣಾ ನ್ಯಾಯಾಲಯಕ್ಕೆ ವಾಪಸ್ ಕಳಿಸುವ ಬಗ್ಗೆ ಸೆಪ್ಟೆಂಬರ್ 23ಕ್ಕೆ ಆದೇಶ ಹೊರಡಿಸಲಾಗುವುದು ಎಂದು ನ್ಯಾಯಪೀಠ ತಿಳಿಸಿದೆ.