ಪ್ರಜಾಸ್ತ್ರ ಸುದ್ದಿ
ಧಾರವಾಡ(Dharwad): ಸೋಮವಾರ ನಡೆದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹಾಗೂ ವಿಧಾನ ಪರಿಷತ್ ಸದಸ್ಯ ಎಫ್.ಎಚ್ ಜಕ್ಕಪ್ಪನವರ ನಡುವೆ ಮಾತಿನ ಜಟಾಪಟಿ ನಡೆಯಿತು. ಸಮಾಜ ಕಲ್ಯಾಣ ಇಲಾಖೆಯವರು ಮಾಹಿತಿ ನೀಡುತ್ತಿಲ್ಲ. ಎಸ್ಸಿ, ಎಸ್ಟಿಯನ್ನು ಜಿಲ್ಲೆಯಲ್ಲಿ ನಿರ್ಲಕ್ಷ್ಯ ಮಾಡಲಾಗುತ್ತಿದೆ. ಮಾತನಾಡಲು ಅವಕಾಶ ನೀಡುತ್ತಿಲ್ಲವೆಂದು ಜಕ್ಕಪ್ಪನವರ ಏರು ಧ್ವನಿಯಲ್ಲಿ ಹೇಳಿದರು.
ಮಾತನಾಡಲು ನಿಮಗೆ ಅವಕಾಶ ನೀಡದ್ದೇವೆ. ಅಲಕ್ಷ್ಯ ಮಾಡಿಲ್ಲ. ಯಾಕೆ ಕಿರುಚುತ್ತಿದ್ದೀರಿ. ಅದರಿಂದ ಏನು ಗಳಿಸುತ್ತೀರಿ ಎಂದು ಸಚಿವ ಲಾಡ್ ಹೇಳುತ್ತಿದ್ದಂತೆ, ನಾನು ಕಿರುಚುತ್ತಿಲ್ಲ. ನನ್ನ ಧ್ವನಿ ಇರುವುದು ಹೀಗೆ. ಜಿಲ್ಲಾ ಉಸ್ತುವಾರಿ ಸಚಿವರಿಗೆ ತಾಳ್ಮೆ ಇಲ್ಲ. ವಿಷಯ ಪ್ರಸ್ತಾಪಿಸಲು ಅವಕಾಶ ನೀಡದಿದ್ದರೆ ಹೊರಗೆ ಹೋಗುತ್ತೇನೆ ಎಂದರು. ಹೊರಗೆ ಹೋಗಿ ಎಂದು ನಾನು ನಿಮಗೆ ಹೇಳಿಲ್ಲ. ಹೋಗಬೇಕಿದ್ದರೆ ನೀವು ಹೋಗಿ ಎಂದು ಸಚಿವ ಲಾಡ್ ಹೇಳಿದರು.
ಆಡಳಿತ ಪಕ್ಷದ ಶಾಸಕನಿಗೆ ಹೊರಗೆ ಹೋಗುವುದಾದರೆ ಹೋಗಿ ಎಂದರೆ ಏನರ್ಥ ಅಂತಾ ಮರು ಪ್ರಶ್ನಿಸಿದರು. ಹೊರಗೆ ಹೋಗುವುದಾಗಿ ಹೇಳಿದ್ದು ನೀವು. ಸುಮ್ಮನೆ ಆರೋಪ ಮಾಡಬೇಡಿ. ನಿಮಗೆ ಮಾತನಾಡಲು ಅವಕಾಶ ನೀಡಿದ್ದೇವೆ ಎಂದರು. ಬಿಜೆಪಿ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಶಾಸಕ ಎಂ.ಆರ್ ಪಾಟೀಲ ಅವರು ಜಕ್ಕಪ್ಪನವರನ್ನು ಸಮಾಧಾನ ಮಾಡಿ ಕೂರಿಸಿದರು.




