ಪ್ರಜಾಸ್ತ್ರ ಸುದ್ದಿ
ಮಂಗಳೂರು(Mangaloru): ಸಾಲ ಕೊಡಿಸುವುದಾಗಿ ನಂಬಿಸಿ ಕೋಟ್ಯಾಂತರ ರೂಪಾಯಿ ವಂಚಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ನಿವಾಸಿ ರೋಹನ್ ಸಲ್ದಾನ್ ಬಂಧಿತ ಆರೋಪಿಯಾಗಿದ್ದಾನೆ. ಈತನ ಐಷಾರಾಮಿ ಮನೆ, ಅಲ್ಲಿನ ವಸ್ತುಗಳನ್ನು ನೋಡಿ ಸ್ವತಃ ಪೊಲೀಸರು ಸಹ ಶಾಕ್ ಆಗಿದ್ದಾರೆ. ಜಪ್ಪಿನಮೊಗರು ಎಂಬಲ್ಲಿರುವ ಐಷಾರಾಮಿ ಮನೆಯಲ್ಲಿ ಮಲೇಶಿಯಾದ ಯುವತಿಯರೊಂದಿಗೆ ಪಾರ್ಟಿ ಮಾಡುವಾಗ ಬಂಧಿಸಲಾಗಿದೆ.
ಉದ್ಯಮಿಗಳನ್ನು, ಶ್ರೀಮಂತರನ್ನು ಟಾರ್ಗೆಟ್ ಮಾಡುತ್ತಿದ್ದ. ಅವರಿಗೆ ಬ್ಯಾಂಕ್, ಸಂಘ-ಸಂಸ್ಥೆಗಳಿಂದ ನೂರಾರು ಕೋಟಿ ರೂಪಾಯಿ ಸಾಲ ಕೊಡಿಸುವುದಾಗಿ ನಂಬಿಸುತ್ತಿದ್ದ. ಅದಕ್ಕಾಗಿ ಪ್ರೊಸೆಸಿಂಗ್ ಫೀ, ಸ್ಟ್ಯಾಂಪ್ ಡ್ಯೂಟಿ, ಕಾನೂನು ಶುಲ್ಕ ಎಂದು 50 ಲಕ್ಷದಿಂದ 1 ಕೋಟಿ ರೂಪಾಯಿ ತನಕ ಮುಂಗಡ ಹಣ ಪಡೆಯುತ್ತಿದ್ದ. ಕಳೆದ ಮೂರು ತಿಂಗಳಲ್ಲಿ 40 ಕೋಟಿ ರೂಪಾಯಿ ಈತನ ಬ್ಯಾಂಕ್ ಅಕೌಂಟ್ ನಲ್ಲಿ ವಹಿವಾಟು ನಡೆದಿದೆ.
ಈತನಿಂದ ವಂಚನೆಗೊಳಗಾದ ಇಬ್ಬರು ಉದ್ಯಮಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದ ಪೊಲೀಸರು ಆತನ ಮನೆಯಲ್ಲಿ ಬಂಧಿಸಿದ್ದಾರೆ. ಮನೆಯಲ್ಲಿ ಐಷಾರಾಮಿ ವಸ್ತುಗಳು, ಅಪಾರ ಪ್ರಮಾಣದಲ್ಲಿ ವಿದೇಶಿ ಮದ್ಯದ ಬಾಟಲ್ ಗಳು, ಮನೆಯೊಳಗೆ ರಹಸ್ಯ ರೂಮು ಸೇರಿದಂತೆ ಅಲ್ಲಿನ ವೈಭೋಗ ಕಂಡು ಪೊಲೀಸರೆ ಶಾಕ್ ಆಗಿದ್ದಾರೆ. ಪೊಲೀಸರ ಅತಿಥಿಯಾಗಿ ರೋಹನ್ ಸಲ್ದಾನ್ ನನ್ನು ತನಿಖೆ ಮಾಡಲಾಗುತ್ತಿದೆ.