ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaluru): ಟ್ಯೂಷನ್ ಮುಗಿಸಿಕೊಂಡು ಮನೆಗೆ ಹೊರಟಿದ್ದ ಬಾಲಕನ್ನು ಅಪಹರಣ ಮಾಡಿ, ಕೊಲೆ ಮಾಡಿದ ಪ್ರಕರಣ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಗುರುವಾರ ತಡರಾತ್ರಿ ಕಗ್ಗಲಿಪುರ ಅರಣ್ಯದಲ್ಲಿ ಕುಳಿತಿದ್ದ ಆರೋಪಿಗಳ ಮೇಲೆ ಪೊಲೀಸರು ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ. ಗೋಪಾಲಕೃಷ್ಣ ಹಾಗೂ ಗುರುಮೂರ್ತಿ ಬಂಧಿತ ಹಂತಕರು. ಇವರ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದ್ದು, ಜಯನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ಹಿನ್ನಲೆ: ಬುಧವಾರ ರಾತ್ರಿ ಮೃತ ಬಾಲಕ ನಿಶ್ಚಿತ್(13) ಟ್ಯೂಷನ್ ಮುಗಿಸಿಕೊಂಡು ಮನೆಗೆ ಹೊರಟಿದ್ದ. ಇವನನ್ನು ಅಪಹರಣ ಮಾಡಿ 5 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಹೀಗಾಗಿ ಹುಳಿಮಾವು ಪೊಲೀಸ್ ಠಾಣೆಗೆ ಪೋಷಕರು ಮಾಹಿತಿ ನೀಡಿದ್ದರು. ಜೊತೆಗೆ 5 ಲಕ್ಷ ರೂಪಾಯಿ ಕೊಡಲು ಸಹ ಮುಂದಾಗಿದ್ದರು. ಆದರೆ, ಕಿರಾತಕರು ಬಾಲಕನನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಹತ್ಯೆ ಮಾಡಿದ್ದಾರೆ. ಪೆಟ್ರೋಲ್ ಸುರಿದ ಸುಟ್ಟಿದ್ದಾರೆ.
ಗುರುವಾರ ಸಂಜೆ ದನಗಳನ್ನು ಮನೆಗೆ ತೆಗೆದುಕೊಂಡು ಹೋಗಲು ಕಾಡಿಗೆ ಬಂದಿದ್ದ ವ್ಯಕ್ತಿಯೊಬ್ಬರು ಸುಟ್ಟ ಸ್ಥಿತಿಯಲ್ಲಿದ್ದ ಬಾಲಕನ ಮೃತದೇಹ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೊಲೆಯಾದ ಬಾಲಕನ ತಂದೆಗೆ ಪರಿಚಯವಿದ್ದ ಆರೋಪಿಗಳಿಂದಲೇ ಈ ಕೃತ್ಯ ನಡೆದಿದೆ ಎಂದು ಹೇಳಲಾಗುತ್ತಿದೆ. ಕಗ್ಗಲಿಪುರ ಅರಣ್ಯ ಪ್ರದೇಶಲ್ಲಿ ಆರೋಪಿಗಳು ಇದ್ದಾರೆ ಎನ್ನುವ ಖಚಿತ ಮಾಹಿತಿ ಮೇರೆಗೆ ಗುರುವಾರ ತಡರಾತ್ರಿ ದಾಳಿ ನಡೆಸಲಾಗಿದೆ. ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ನೋಡಿದಾಗ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ.