ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belagavi): ಮದುವೆಯಾಗಿ ಎರಡು ಮಕ್ಕಳಿದ್ದರೂ ಅಪ್ರಾಪ್ತೆಯೊಂದಿಗೆ ಸಲುಗೆ ಬೆಳೆಸಿ ಆಕೆಯನ್ನು ಗರ್ಭಿಣಿ ಮಾಡಿದ ಘಟನೆ ಸಂಬಂಧ ವ್ಯಕ್ತಿಯೊಬ್ಬನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ. ಜಿಲ್ಲೆಯ ಕುಲಗೋಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಆರೋಪಿ ಬಸಪ್ಪ ಅಡಿವೆಪ್ಪ ಹಳ್ಳೂರು(32) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಟ್ರ್ಯಾಕ್ಟರ್ ಡ್ರೈವರ್ ಆಗಿರುವ ಈತ, ಬಾಲಕಿಯನ್ನು ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ.
ಬಾಲಕಿಯ ಆರೋಗ್ಯದಲ್ಲಿ ಹಾಗೂ ದೈಹಿಕವಾಗಿ ಸ್ವಲ್ಪ ವ್ಯತ್ಯಾಸ ಕಂಡು ಬಂದಾಗ ಪೋಷಕರು ವೈದರ ಬಳಿ ಕರೆದುಕೊಂಡು ಹೋಗಿದ್ದಾರೆ. ಆಗ ಅವರಿಗೆ ಬರಸಿಡಿಲು ಬಡಿದಂತಾಗಿದೆ. ಮಗಳು ಗರ್ಭಿಣಿಯಾಗಿರುವುದನ್ನು ತಿಳಿದು ಕಂಗಾಲಾಗಿದ್ದಾರೆ. ಇದಕ್ಕೆ ಕಾರಣನಾದ ಆರೋಪಿ ಬಸಪ್ಪ ಹಳ್ಳೂರು ವಿರುದ್ಧ ದೂರು ನೀಡಿದ್ದಾರೆ. ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿಕೊಂಡು ಆತನನ್ನು ವಶಕ್ಕೆ ಪಡೆದಿದ್ದಾರೆ. ಮಾತಿಗೆ ಮರುಳಾಗುವುದು, ಏನೋ ಒಂದಿಷ್ಟು ಹೇಳಿದಾಗ ನಂಬುವುದು ಮಾಡಿದ ಪರಿಣಾಮ ಕುಟುಂಬಸ್ಥರಿಗೆಲ್ಲ ಜೀವನ ಪರ್ಯಂತ ನೋವು ಕೊಡುವ ಕೆಲಸವನ್ನು ಮಾಡುತ್ತಿರುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆಯಾಗಿದೆ.