ಪ್ರಜಾಸ್ತ್ರ ಸುದ್ದಿ
ಮಂಗಳೂರು(Mangaloru): ಮದ್ವೆಯಾಗುವುದಾಗಿ ನಂಬಿಸಿ ಸಹಪಾಠಿಯನ್ನು ತಾಯಿಯಾಗುವಂತೆ ಮಾಡಿ ವಂಚನೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ, ಯುವಕನನ್ನು ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪುತ್ತೂರಿನ ಬಿಜೆಪಿ ಮುಖಂಡ, ನಗರಸಭೆಸದಸ್ಯ ಜಗನ್ನಿವಾಸ್ ರಾವ್ ಎಂಬುವರ ಪುತ್ರ ಕೃಷ್ಣ ಜೆ.ರಾವ್(21) ಬಂಧಿತ ಆರೋಪಿಯಾಗಿದ್ದಾನೆ.
ಪುತ್ತೂರಿನ ಸಂತ್ರಸ್ತೆ ಜೂನ್ 21ರಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಜೂನ್ 27ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಆರೋಪಿ ವಿರುದ್ಧ ಎಫ್ಐಆರ್ ದಾಖಲಾಗುತ್ತಿದ್ದಂತೆ ಪರಾರಿಯಾಗಿದ್ದ. ಆತನನ್ನು ಶುಕ್ರವಾರ ರಾತ್ರಿ ಮೈಸೂರಿನಲ್ಲಿ ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.
ಯುವತಿ ತಾಯಿ ಪುತ್ತೂರಿನಲ್ಲಿ ಮಾಧ್ಯಮಗೋಷ್ಠಿ ನಡೆಸಿ, ನನ್ನ ಮಗಳಿಗೆ ಅನ್ಯಾಯವಾಗಿದೆ. ಶಾಸಕರು, ಹಿಂದೂಪರ ಸಂಘಟನೆಯವರು ಯಾರು ಸಹಾಯಕ್ಕೆ ಬರುತ್ತಿಲ್ಲ. ಸ್ಥಳೀಯ ಶಾಸಕ ಅಶೋಕ್ ರೈ ದೂರು ದಾಖಲಿಸದಂತೆ, ಎಲ್ಲವನ್ನು ಬಗೆಹರಿಸುವುದಾಗಿ ಹೇಳಿದ್ದರು. ತಮ್ಮ ಮಗನಿಗೆ 21 ವರ್ಷ ಆದ ಕೂಡಲೇ ಮದುವೆ ಮಾಡಿಸುವುದಾಗಿ ಯುವಕನ ಹೆತ್ತವರು ಮುಚ್ಚಳಿಕೆ ಬರೆದುಕೊಟ್ಟಿದ್ದರು. ಈಗ ಯಾರೂ ನೆರವಿಗೆ ಬರುತ್ತಿಲ್ಲವೆಂದು ಹೇಳಿದ್ದಾರೆ.