ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಅನುದಾನಿತ, ಖಾಸಗಿ ಶಿಕ್ಷಣ ಸಂಸ್ಥೆಗಳ ಬಗ್ಗೆ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸುವ ಸಮಯ ಈಗ ಬಂದಿದೆ. ಕಳೆದ 30 ವರ್ಷಗಳಿಂದ ಅನುದಾನಿತ ಶಾಲೆಗಳಿಗೆ ಅನುದಾನ ನೀಡಿಲ್ಲ. ಸಚಿವರು, ಶಾಸಕರ ರಾಜಕೀಯ ಹೇಳಿಕೆಗಳಲ್ಲೇ ಕಾಲ ಕಳೆಯುತ್ತಿರುವ ರಾಜ್ಯ ಸರ್ಕಾರದಲ್ಲಿ ಒಂದು ರೀತಿ ತುಘಲಕ್ ದರ್ಬಾರ್ ನಡೆಯುತ್ತಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ವಾಗ್ದಾಳಿ ನಡೆಸಿದರು.
ಪಟ್ಟಣದಲ್ಲಿ ಮಂಗಳವಾರ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, 1995ರ ನಂತರದ ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ನೀಡುತ್ತಿಲ್ಲ. ಶಿಕ್ಷಕರು ಜೀವನ ಮಾಡುವುದು ಹೇಗೆ? ಹೀಗೆ ಆದರೆ ಎಲ್ಲ ಖಾಸಗಿ, ಅನುದಾನಿತ ಶಿಕ್ಷಣ ಸಂಸ್ಥೆಗಳು ಒಂದೊಂದೆ ಮುಚ್ಚಬೇಕಾಗುತ್ತೆ. ಶಿಕ್ಷಣ ವ್ಯವಸ್ಥೆಯನ್ನು ಪೂರ್ತಿಯಾಗಿ ಸರ್ಕಾರ ನೋಡಿಕೊಳ್ಳಲಿ, ಇಲ್ಲವೆ ತನ್ನಿಂದ ಆಗುವುದಿಲ್ಲವೆಂದು ಖಾಸಗೀಕರಣ ಮಾಡಲಿ. ಅನುದಾನ ಸಂಬಂಧ ಇರುವ ನಿಯಮಗಳಿಂದಾಗಿ ಶೇಕಡ 50ರಷ್ಟು ಶಿಕ್ಷಣ ಸಂಸ್ಥೆಗಳಿಗೂ ಅನುದಾನ ಸಿಗುತ್ತಿಲ್ಲ. ಇನ್ನು ಖಾಲಿಯುರುವ ಹುದ್ದೆಗಳ ಭರ್ತಿ ಸಹ ಆಗುತ್ತಿಲ್ಲ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಹೇಳುತ್ತಾರೆ. ಅಲ್ಲಿ ನೋಡಿದರೆ ಸಾಫ್ಟ್ ವೇರ್ ಅಭಿವೃದ್ಧಿ ಪಡಿಸಲಾಗುತ್ತಿದೆ. ಪ್ರಸ್ತಾವನೆ ತರಬಾರದು ಅಂತಾರೆ. ಇದರಿಂದಾಗಿ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ. ವಿಳಂಬ ದೋರಣೆ ಬಿಟ್ಟು ಅನುದಾನ ನೀಡಬೇಕು ಎಂದು ಆಗ್ರಹಿಸಿದರು. ಈ ವೇಳೆ ಭೀಮಾಶಂಕರ ತಾರಾಪುರ, ಸಿದ್ದನಗೌಡ ಪಾಟೀಲ, ಶಿವಾನಂದ ರೋಡಗಿ, ಜಗದೀಶ ಪಾಟೀಲ ಸೇರಿ ಇತರರು ಉಪಸ್ಥಿತರಿದ್ದರು.