ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಮೆಕ್ಕೆಜೋಳ ಖರೀದಿಗೆ ವಿಧಿಸಿದ ಮಾನದಂಡ ರದ್ದುಪಡಿಸಿ ಜಿಲ್ಲೆಗಳಲ್ಲಿಯೇ ಖರೀದಿಸಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಅಖಂಡ ಕರ್ನಾಟಕ ರೈತ ಸಂಘ ವಿಜಯಪುರ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ರೈತರು ಬೆಳೆದ ಮೆಕ್ಕೆಜೋಳ ಖರೀದಿಸಲು ಸರ್ಕಾರದ ಹಲವಾರು ಮಾನದಂಡಗಳನ್ನು ವಿಧಿಸುವ ಮೂಲಕ ರೈತರ ಬದುಕನ್ನು ಬೀದಿಗೆ ತರಲು ಹೊರಟಿದೆ. ಆಯಾ ಜಿಲ್ಲೆಯ ವ್ಯಾಪ್ತಿಯ ಪ್ರತಿಯೊಂದು ಪಿಕೆಪಿಎಸ್ ಗೆ ನೀಡಿ ಅಲ್ಲಿಯೇ ಮೆಕ್ಕೆಜೋಳ ಖರೀದಿಸಬೇಕು. ಅದನ್ನು ಬಿಟ್ಟು ಧಾರವಾಡದಲ್ಲಿ ಖರೀದಿಸಲು ಸರ್ಕಾರ ನಿರ್ಧರಿಸುವುದು ಇದು ಸಂಪೂರ್ಣ ರೈತ ವಿರೋಧಿಯಾಗಿದೆ ಎಂದರು.
ಮಾರಾಟ ಮಾಡುವ ಮೊದಲು ರೈತರಿಂದ ಮೆಕ್ಕೆಜೋಳ ಮಾದರಿ ಪರಿಷ್ಕರಣೆಗಾಗಿ ಪ್ರತಿಯೊಬ್ಬ ರೈತನಿಂದ ಒಂದು ಕೆಜಿ ಮೆಕ್ಕೆಜೋಳವನ್ನು ಧಾರವಾಡಕ್ಕೆ ಕಳುಹಿಸಲು ಕೆಎಂಎಫ್ ಅಧಿಕಾರಗಳ ಮುಖಾಂತರ ಧಾರವಾಡಕ್ಕೆ ತೆಗೆದುಕೊಂಡು ಹೋಗಿ ಪರೀಕ್ಷೆ ಮಾಡಿಸಿ ನಂತರ ಗುಣಮಟ್ಟದ ಮೆಕ್ಕೆಜೋಳ ಇವೆ ಎಂದು ತಿಳಿದು ಬಂದಾಗ ಮಾತ್ರ ರೈತರಿಂದ ಖರೀದಿಸಲು ಸರ್ಕಾರ ತೀರ್ಮಾನಿಸಿದೆ. ಅದು ಅಲ್ಲದೆ ಪ್ರತಿ ರೈತನಿಂದ 20 ಕ್ವಿಂಟಲ್ ಮೆಕ್ಕೆಜೋಳ ಖರೀದಿಸುವದೆಂದು ಸರ್ಕಾರ ಹೇಳಿರುವುದು ಸರಿಯಾದ ಕ್ರಮವಲ್ಲ. ಮೆಕ್ಕೆಜೋಳವನ್ನುಧಾರವಾಡದಲ್ಲಿಯೇ ಖರೀದಿಸುವುದನ್ನು ಕೆಎಂಎಸ್ ಅಡಿ ತೆಗೆದುಕೊಳ್ಳಲಾಗುವುದೆಂದು ಹೇಳಲಾಗಿದೆ. ರೈತರು ಧಾರವಾಡಕ್ಕೆ ಮೆಕ್ಕೆಜೋಳ ತೆಗೆದುಕೊಂಡು ಹೋಗುವುದೆಂದರೆ ರೈತರಿಗೆ ಎಷ್ಟು ತೊಂದರೆಯಾಗುತ್ತದೆ ಎಂಬುದು ಸರ್ಕಾರಕ್ಕೆ ಅರವಿಲ್ಲದಂತಾಗಿದೆ. ವಾಹನ ಬಾಡಿಗೆಗೆ ಸಾವಿರಾರು ಹಣ ಖರ್ಚಾಮಾಡುವುದು ರೈತರಿಗೆ ಸಾಧ್ಯವೇ? ಮೊದಲೇ ತೊಗರಿ ಬೆಳೆ ಹಾಳಾಗಿ ತೀವ್ರ ಸಂಕಷ್ಟದಲ್ಲಿರುವ ರೈತರಿಗೆ ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ. ಸರ್ಕಾರದ ಈ ನಿರ್ಣಯವನ್ನು ಕೈಬಿಟ್ಟು ಆಯಾ ಜಿಲ್ಲೆಯ ಪ್ರತಿ ಪಿಕೆಪಿಎಸ್ ನಲ್ಲಿ ಖರೀದಿಸುವಂತಾಗಬೇಕು ಎಂದರು.
ಈ ಸಂದರ್ಭದಲ್ಲಿ ಸದಾಶಿವ ಬಟರಗಿ, ಹೊನ್ನಪ್ಪ ಗೋಟ್ಯಾಳ, ಶಿವು ಬಿರಾದಾರ, ಲಕ್ಷ್ಮಣ ಕುಂಬಾರ, ಜಗನ್ನಾಥ ಮಸರಕಲ್ಲ, ಶಿವರಾಜ ಡೋರಗಿಹಳ್ಳಿ, ಗುರು ಕೋಟ್ಯಾಳ, ಮಲ್ಲು ಕೊಕಟನೂರ, ಬಾಗೇವಾಡಿ ತಾಲೂಕಾ ಪ್ರಧಾನ ಕಾರ್ಯದರ್ಶಿ ಪ್ರಹ್ವಾಲದ ನಾಗರಾಳ, ಬಸವನ ಬಾಗೇವಾಡಿ ಉಪಾಧ್ಯಕ್ಷ ಹೊನಕರೇರಪ್ಪ ತೆಲಗಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.




