ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಈ ಬಾರಿ ವಿಶಿಷ್ಟ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು. ಪಟ್ಟಣದ ಬಸವ ಮಂಟಪದಲ್ಲಿ ಭಾನುವಾರ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಬುಧವಾರ ಮುಂಜಾನೆ 10 ಗಂಟೆಗೆ ಬಸವೇಶ್ವರ ವೃತ್ತದ ಬಳಿ ಸಾರಂಗಮಠದ ಪ್ರಭುಸಾರಂಗದೇವ ಶಿವಾಚಾರ್ಯರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಅಲ್ಲಿಂದ ಮೆರವಣಿಗೆ ನಡೆಯಲಿದೆ ಎಂದರು.
ವಿವೇಕಾನಂದ ವೃತ್ತದ ಮೂಲಕ ಸಾಗಿ ಟಿಪ್ಪು ಸುಲ್ತಾನ್ ವೃತ್ತ, ಅಂಬೇಡ್ಕರ್ ವೃತ್ತ, ಅಂಬಿಗರ ಚೌಡಯ್ಯ ವೃತ್ತದ ಮೂಲಕ ಬಸವ ಮಂಟಪ ತಲುಪಲಿದೆ. ಈ ವೇಳೆ ವಿವಿಧ ಕಲಾ ತಂಡಗಳು ಭಾಗವಹಿಸಲಿವೆ. ಸಂಜೆ ವಿಶೇಷ ಕಾರ್ಯಕ್ರಮ ನಡೆಯಲಿದೆ. ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಶರಣರ ವಚನಗಳು, ಗೀತೆಗಳನ್ನು ಡಿಜೆ ಮೂಲಕ ತಲುಪಿಸಲಾಗುವುದು ಎಂದು ಹೇಳಿದರು.
ಈ ವೇಳೆ ಶಿವಾನಂದ ಕಲಬುರ್ಗಿ, ಮುತ್ತು ಮುಂಡೇವಾಡಗಿ, ಎಂ.ಎಂ ಹಂಗರಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರಿ, ಕಸಾಪ ಮಾಜಿ ಅಧ್ಯಕ್ಷ ಚಂದ್ರಶೇಖರ ದೇವರೆಡ್ಡಿ, ಬಸವ ದಳದ ಅಧ್ಯಕ್ಷ ಮಲ್ಲಿಕಾರ್ಜುನ ಅರ್ಜುಣಗಿ, ಶಿವಕುಮಾರ ಶಿವಸಿಂಪಗೇರ, ಶೈಲಜಾ ಸ್ಥಾವರಮಠ, ಸುನಂದಾ ಯಂಪೂರೆ, ಶರಣಬಸವ ಲಂಗೋಟಿ ಸೇರಿದಂತೆ ಬಸವ ಅನುಯಾಯಿಗಳು ಉಪಸ್ಥಿತರಿದ್ದರು.