Ad imageAd image

84 ಕುಟುಂಬಗಳಿಗೆ ನಿವೇಶನ ಹಾಗೂ ಆರ್ಥಿಕ ಸಹಾಯ: ಶಾಸಕ ಅಶೋಕ ಮನಗೂಳಿ

Nagesh Talawar
84 ಕುಟುಂಬಗಳಿಗೆ ನಿವೇಶನ ಹಾಗೂ ಆರ್ಥಿಕ ಸಹಾಯ: ಶಾಸಕ ಅಶೋಕ ಮನಗೂಳಿ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ಪಟ್ಟಣದ ಸೋಂಪುರ ರಸ್ತೆಯಲ್ಲಿರುವ 842/2 ಸರ್ವೇ ನಂಬರ್ ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ಶಾಸಕ ಅಶೋಕ ಮನಗೂಳಿ ಅವರು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ್ದು, ಆಶ್ರಯ ಸಮಿತಿ ಸಭೆಯನ್ನು ಕರೆಯಲಾಗಿದೆ. ಅವರಿಗೆ ಪರ್ಯಾಯವಾಗಿ ಏನಾದರೂ ಮಾಡಬೇಕು. ಅದು ನಮ್ಮ ಕರ್ತವ್ಯ ಹಾಗೂ ಮಾನವೀಯತೆ. ಅಂತರಗಂಗಿಗೆ ಹೋಗುವ ರಸ್ತೆಯಲ್ಲಿನ 10 ಎಕರೆ ಜಾಗದಲ್ಲಿ ಹಿಂದಿನ ಪುರಸಭೆ ಆಡಳಿತ ಎನ್ಎ ಮಾಡಿ 186 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಿದ್ದಾರೆ. ಉಳಿದಿರುವ 225 ನಿವೇಶನಗಳಲ್ಲಿ ಈ 84 ಕುಟುಂಬಸ್ಥರಿಗೆ ನೀಡಿ, ಮೂಲಭೂತ ಸೌಲಭ್ಯ ಒದಗಿಸಿಕೊಡುವ ಸಂಬಂಧ ಸಭೆ ಕರೆಲಾಗಿತ್ತು ಎಂದರು.

24 ಸರ್ವೇ ನಂಬರ್ ನಲ್ಲಿ ಎನ್ಎ ಆಗಿಲ್ಲ. ಅದೆಲ್ಲ ಕೆಲಸ ಆಗಬೇಕು ಎಂದರೆ ಐದಾರು ತಿಂಗಳಾಗುತ್ತೆ. ತುರ್ತಾಗಿ ಅಂತರಗಂಗಿ ರಸ್ತೆಯಲ್ಲಿನ ಜಾಗದಲ್ಲಿ ನಿವೇಶನ ಹಂಚಿಕೆ ಮಾಡುವ ನಿರ್ಣಯ ಮಾಡಲಾಗಿದೆ. ಈ ಸಂಬಂಧ ಧರಣಿ ನಿರತರಾಗಿರುವ ಪ್ರಮುಖರೊಂದಿಗೆ ಮಾತನಾಡಿದ್ದು, ಅವರು ಚರ್ಚೆ ಮಾಡುವುದಾಗಿ ಹೇಳಿದ್ದಾರೆ. ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಮಾಡಿ ಅವರಿಗೆ ಮನೆ ಕಟ್ಟಿಸಿಕೊಡುವ ಕೆಲಸ ಮಾಡಲಾಗುವುದು. ಹೀಗಾಗಿ ಅಂತರಗಂಗಿ ರಸ್ತೆಯಲ್ಲಿನ ಜಾಗಕ್ಕೆ 84 ಕುಟುಂಬಸ್ಥರಲ್ಲಿ ಸ್ಥಳಾಂತರಗೊಳ್ಳಿ ಎಂದು ಮನವಿ ಮಾಡುತ್ತೇನೆ. ತಾತ್ಕಾಲಿಕವಾಗಿ ಶೆಡ್ ನಿರ್ಮಿಸಿಕೊಳ್ಳಲು ಮನಗೂಳಿ ಟ್ರಸ್ಟ್ ವತಿಯಿಂದ 84 ಕುಟುಂಬಸ್ಥರಿಗೆ ತಲಾ 25 ಸಾವಿರ ರೂಪಾಯಿ ಸಹಾಯಧನ ನೀಡುತ್ತೇನೆ ಎಂದರು.

‘ಮಾಜಿ ಶಾಸಕ ಭೂಸನೂರ ಅವರು ಜಾಗ ಕಬಳಿಕೆ ಆರೋಪ ಮಾಡಿದ್ದಾರೆ. ಅವರು ಒಂದು ತಿಂಗಳಲ್ಲಿ ಅದನ್ನು ಸಾಬೀತು ಮಾಡಿದರೆ ನಾನು ರಾಜೀನಾಮೆ ನೀಡುತ್ತೇನೆ. ಇಲ್ಲದಿದ್ದರೆ 31ನೇ ದಿನಕ್ಕೆ ಅವರು ರಾಜಕೀಯ ನಿವೃತ್ತಿ ಘೋಷಿಸಬೇಕು. ಇದು ರಾಜಕೀಯ ಮಾಡವ ಸಮಯವಲ್ಲ. ಅದಕ್ಕೆ ಸಾಕಷ್ಟು ವೇದಿಕೆಗಳಿವೆ. ನಮ್ಮ ಕುಟುಂಬದ ಬಗ್ಗೆ, ನನ್ನ ಬಗ್ಗೆ, ನಮ್ಮ ಸರ್ಕಾರದ ಬಗ್ಗೆ ಮಾತನಾಡಿದ್ದಾರೆ. ಅವರಿಗೆ ತಕ್ಕ ಉತ್ತರ ನೀಡುವ ಸಾಮರ್ಥ್ಯ ನನಗೂ ಇದೆ. ನಮ್ಮ ಮುಖಂಡರಿಗೂ ಇದೆ.’ –  ಅಶೋಕ ಮನಗೂಳಿ, ಶಾಸಕರು, ಸಿಂದಗಿ

ಇದಕ್ಕೂ ಮೊದಲು ಇಂಡಿ ಉಪವಿಭಾಗಾಧಿಕಾರಿ ಅನುರಾಧ ವಸ್ತ್ರದ ಅವರು ಜಾಗದ ವಿವಾದ ನ್ಯಾಯಾಲಯದಲ್ಲಿ ಯಾವಾಗಿನಿಂದ ಶುರುವಾಗಿ ಏನೆಲ್ಲ ಆಗಿದೆ ಅನ್ನೋದನ್ನು ತಿಳಿಸಿದರು. ಈ ವೇಳೆ ತಹಶೀಲ್ದಾರ್ ಕರೆಪ್ಪ ಬೆಳ್ಳಿ, ಪುರಸಭೆ ಮುಖ್ಯಾಧಿಕಾರಿ ರಾಜಶೇಖರ.ಎಸ್, ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ, ಉಪಾಧ್ಯಕ್ಷ ಸಂದೀಪ ಚೌರ, ಸಿಪಿಐ ನಾನಾಗೌಡ ಪೊಲೀಸ್ ಪಾಟೀಲ, ಪಿಎಸ್ಐ ಆರೀಫ್ ಮುಶಾಪುರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಕಾಂಬಳೆ ಸೇರಿದಂತೆ ಆಶ್ರಯ ಸಮಿತಿ ಸದಸ್ಯರು, ಸಿಬ್ಬಂದಿ ಹಾಜರಿದ್ದರು.

WhatsApp Group Join Now
Telegram Group Join Now
Share This Article