ಪ್ರಜಾಸ್ತ್ರ ಸುದ್ದಿ
ದುಬೈ(Dubai): ಇಲ್ಲಿನ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಏಷ್ಯ ಕಪ್ ಟಿ-20 ಟೂರ್ನಿಯ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಭರ್ಜರಿ ಗೆಲುವು ಸಾಧಿಸುವ ಮೂಲಕ ಕಪ್ ತನ್ನದಾಗಿಸಿಕೊಂಡಿತು. ಈ ಮೂಲಕ ಪಾಕಿಸ್ತಾನದ ಆಟಗಾರರ ಮಾತುಗಳಿಗೆ, ಹಾರಾಟಗಳಿಗೆ ತಕ್ಕ ಪಾಠ ಕಲಿಸಿತು. ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಅವರ ಲೆಕ್ಕಾಚಾರವನ್ನು ಬೌಲರ್ ಗಳು ನಿಜ ಮಾಡಿದರು.
ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡ 19.1 ಓವರ್ ಗಳಿಗೆ 146 ರನ್ ಗಳಿಗೆ ಆಲೌಟ್ ಆಯಿತು. ಆರಂಭದಲ್ಲಿ ಶಬ್ಜದ್ ಫರ್ಹಾನ್ 57, ಫಕರ್ ಝಮಾನ್ 46 ರನ್ ಗಳಿಸುವ ಮೂಲಕ 9 ಓವರ್ ಗಳಲ್ಲಿ 84 ರನ್ ಗಳಿಸಿದರು. ಆಗ ಸ್ಕೋರ್ ದೊಡ್ಡ ಮಟ್ಟದಲ್ಲಿ ಹೋಗುತ್ತೆ ಎಂದು ನಿರೀಕ್ಷಿಸಲಾಗಿತ್ತು. ಇವರಿಬ್ಬರನ್ನು ವರುಣ್ ಚಕ್ರವರ್ತಿ ಔಟ್ ಮಾಡುವ ಮೂಲಕ ಶುಭಾರಂಭ ಮಾಡಿದರು. ಮುಂದೆ 62 ರನ್ ಗಳಲ್ಲಿ ಪಾಕಿಸ್ತಾನ ಸರ್ವಪತನ ಕಂಡಿತು. ಭಾರತ ಪರ ಕುಲದೀಪ್ ಯಾವ್ 4 ವಿಕೆಟ್ ಕಿತ್ತು ಸಂಭ್ರಮಿಸಿದರು. ಬೂಮ್ರಾ, ವರುಣ್ ಚಕ್ರವರ್ತಿ, ಅಕ್ಷರ್ ಪಟೇಲ್ ತಲಾ 2 ವಿಕೆಟ್ ಪಡೆದು ಸಾಥ್ ನೀಡಿದರು.
ಪಾಕಿಸ್ತಾನದ ಸಚಿವ ಮೊಹಸೀನ್ ನಖ್ವಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರಾಗಿದ್ದಾರೆ. ಹೀಗಾಗಿ ಟೀಂ ಇಂಡಿಯಾ ಚಾಂಪಿಯನ್ ಆದರೂ ಟ್ರೋಫಿ ಸ್ವೀಕರಿಸಲು ನಿರಾಕರಿಸಿತು. ಹೀಗಾಗಿ ಒಂದಿಷ್ಟು ಹೈಡ್ರಾಮ್ ನಡೆಯಿತು. ಇದರಿಂದಾಗಿ ನಖ್ವಿ ವೇದಿಕೆಯಿಂದ ಹೊರ ನಡೆದರು. ಹೋಗುವಾಗ ಟ್ರೋಫಿಯನ್ನು ತಮ್ಮೊಂದಿಗೆ ತೆಗೆದುಕೊಂಡು ಹೋದರು. ಇದರೊಂದಿಗೆ ಕ್ರಿಕೆಟ್ ಇತಿಹಾಸದಲ್ಲೇ ಚಾಂಪಿಯನ್ ತಂಡ ಟ್ರೋಫಿ ಪಡೆಯದೆ ಹೋಯಿತು.
ಈ 147 ರನ್ ಗಳ ಟಾರ್ಗೆಟ್ ಬೆನ್ನು ಹತ್ತಿದ ಟೀಂ ಇಂಡಿಯಾ ಆರಂಭದಲ್ಲಿ ಎಡವಿತು. ಅಭಿಷೇಕ್ ಶರ್ಮಾ 5, ಶುಭ್ಮನ್ ಗಿಲ್ 12, ನಾಯಕ ಸೂರ್ಯಕುಮಾರ್ ಯಾದವ್ 1 ರನ್ ಗೆ ಔಟ್ ಆದರು. ಆಗ ಇಂಡಿಯನ್ ಕ್ರಿಕೆಟ್ ಪ್ರೇಮಿಗಳಿಗೆ ಸಾಕಷ್ಟು ಆತಂಕ ಮೂಡಿತ್ತು. ತಿಲಕ್ ವರ್ಮಾ ಅಜೇಯ 69 ರನ್, ಸಂಜು ಸ್ಯಾಮ್ಸನ್ 24, ಶಿವಂ ದುಬೆ 33 ರನ್ ಗಳಿಸಿ ತಂಡದ ಗೆಲುವಿಗೆ ಕಾರಣರಾದರು. ರಿಂಕ್ ಸಿಂಗ್ ಅಜೇಯ 1 ರನ್ ಗಳಿಸಿದರು. ಅಂತಿಮವಾಗಿ ಭಾರತ 19.4 ಓವರ್ ಗಳಲ್ಲಿ 150 ರನ್ ಗಳಿಸಿ ಗೆದ್ದು ಬೀಗಿತು. ಈ ಮೂಲಕ ನೋಡುಗರಿಗೆ ಸಖತ್ ಕಿಕ್ ಕೊಟ್ಟಿತ್ತು.
ಪಾಕಿಸ್ತಾನ ಪರ ಫಹೀಮ್ ಅಶ್ರಮ್ 3 ವಿಕೆಟ್ ಪಡೆದರೆ ಶಹೀನ್ ಅಫ್ರೀದಿ, ಅಬ್ರರ್ ಅಹ್ಮಿದ್ ತಲಾ 1 ವಿಕೆಟ್ ಪಡೆದರು. ತಿಲಕ್ ವರ್ಮಾ ಪ್ಲೇಯರ್ ಆಫ್ ದಿ ಮ್ಯಾಚ್ ಆದರು. ಅಭಿಷೇಕ್ ಶರ್ಮಾ ಪ್ಲೇಯರ್ ಆಫ್ ದಿ ಟೂರ್ನ್ ಮೆಂಟ್ ಆದರು.