ಪ್ರಜಾಸ್ತ್ರ ಸುದ್ದಿ
ಚಿಕ್ಕಮಗಳೂರು(Chikkamgaloru): ಶಾಲೆಯಿಂದ ಮನೆಗೆ ಹೊರಟಿದ್ದ ಅತಿಥಿ ಶಿಕ್ಷಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಜಿಲ್ಲೆಯ ಕೊಪ್ಪ ತಾಲೂಕಿನ ಬಸರೀಕಟ್ಟೆ ಗ್ರಾಮದ ವ್ಯಾಪ್ತಿಯಲ್ಲಿ ನಡೆದಿದೆ. ಮಂಗಳವಾರ ಸಂಜೆ ಈ ಕೃತ್ಯ ನಡೆದಿದ್ದು, ಬಾಳೆಹೊನ್ನೂರು ಮೂಲದ ಭವಿತ್(24) ಎಂಬಾತನನ್ನು ಬಂಧಿಸಿದ್ದು, ಉಳಿದವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಕೊಗ್ರೆ ಗ್ರಾಮದಿಂದ ಬಸರೀಕಟ್ಟೆ ಗ್ರಾಮದ ಶಾಲೆಯೊಂದರಲ್ಲಿ ಅತಿಥಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವ ಸಂತ್ರಸ್ತೆ ಮಂಗಳವಾರ ಸಂಜೆ ಶಾಲೆಯಿಂದ ಮನೆಗೆ ಹೋಗುತ್ತಿದ್ದರು. ದಾರಿಯಲ್ಲಿ ನಾಲ್ಕೈದು ಯುವಕರ ತಂಡ ಶಿಕ್ಷಕಿಯನ್ನು ಎಳೆದುಕೊಂಡು ಹೋಗಿದ್ದಾರೆ. ಅಡಿಕೆ ಮರಕ್ಕೆ ಕಟ್ಟಿ ವಿವಸ್ತ್ರಗೊಳಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಆಕೆ ಕಿರುಚಾಡುತ್ತಿದ್ದಾಗ ಬಾಯಿಗೆ ಮಣ್ಣು ಹಾಕಿದ್ದಾರೆ. ಅಷ್ಟರಲ್ಲಿ ಸ್ಥಳೀಯರು ಅಲ್ಲಿಗೆ ಬರುತ್ತಿದ್ದಂತೆ ಕಬ್ಬಿಣದ ರಾಡ್ ನಿಂದ ಶಿಕ್ಷಕಿ ತಲೆಗೆ ಹೊಡೆದು ಪರಾರಿಯಾಗಿದ್ದಾರೆ.
ಗಾಯಗೊಂಡಿರುವ ಶಿಕ್ಷಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಕೊಪ್ಪ ತಾಲೂಕಿನ ಜಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸಂತ್ರಸ್ತೆ ಭವಿತ್ ಅನ್ನೋ ಯುವಕನ ಪ್ರೀತಿ ನಿರಾಕರಿಸಿ ಕಳೆದ ಎರಡು ತಿಂಗಳಿಂದ ಫೋನ್ ನಂಬರ್ ಬ್ಲಾಕ್ ಮಾಡಿದ್ದಳಂತೆ. ಇದರಿಂದ ಆತ ಹೀಗೆ ಮಾಡಿದ್ದಾನೆ ಅನ್ನೋ ಅನುಮಾನ ಮೂಡಿದೆ. ಪೊಲೀಸ್ ತನಿಖೆಯ ಬಳಿಕ ಸತ್ಯ ಹೊರಬರಲಿದೆ.




