ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ವಿಜಯಪುರದ ಕಲಬುರ್ಗಿ ಫೌಂಡೇಶನ್ ವತಿಯಿಂದ ಫೆಬ್ರವರಿ 28ರಂದು ತಾಲೂಕಿನ ಯರಗಲ್ಲ ಬಿ.ಕೆ ಗ್ರಾಮದ ಶ್ರೀ ಸಿದ್ಧಾರೂಢ ಮಠದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ. ಡಾ.ಎಂ.ಎಂ ಕಲಬುರ್ಗಿ ವಚನ ಸಿರಿ ಹಾಗೂ ಸಾಹಿತ್ಯ ಸಿರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ ಎಂದು ಫೌಂಡೇಶನ್ ಅಧ್ಯಕ್ಷ ಶಿವಲಿಂಗಪ್ಪ ಕಲಬುರ್ಗಿ ಹೇಳಿದರು.
ಮಂಗಳವಾರ ಪಟ್ಟಣದ ಬಸವ ಮಂಟಪದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ವರ್ಷ ಬನಹಟ್ಟಿಯ ಸಾಹಿತಿಯಾದ ಬಿ.ಆರ್ ಪೊಲೀಸಪಾಟೀಲ ಅವರಿಗೆ ಡಾ.ಎಂ.ಎಂ ಕಲಬುರ್ಗಿ ಸಾಹಿತ್ಯ ಸಿರಿ, ಧಾರವಾಡದ ಪ್ರಾಧ್ಯಾಪಕಿ ಡಾ.ವೀಣಾ ಯಲಗಾರ ಅವರಿಗೆ ಡಾ.ಎಂ.ಎಂ ಕಲಬುರ್ಗಿ ವಚನ ಸಿರಿ ಪ್ರಶಸ್ತಿ ನೀಡಲಾಗುತ್ತಿದೆ. ತಲಾ 10 ಸಾವಿರ ರೂಪಾಯಿ ನಗದು, ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುತ್ತಿದೆ.
ಯರಗಲ್ಲ ಬಿ.ಕೆ ಗ್ರಾಮದ ಸಿದ್ಧಾರೂಢ ಮಠದ ಅದೈತಾನಂದ ಮಹಾಸ್ವಾಮಿಗಳು ಸಾನಿಧ್ಯ ವಹಿಸುವರು, ನ್ಯೂಜಿಲೆಂಡ್ ಬಸವ ಸಮಿತಿಯ ಸಂಸ್ಥಾಪಕರಾದ ಡಾ.ಲಿಂಗಣ್ಣ ಕಲಬುರ್ಗಿ ಅಧ್ಯಕ್ಷತೆ, ವಿಜಯಪುರದ ಡಾ.ಫ.ಗು ಹಳಕಟ್ಟಿ ಸಂಶೋಧನ ಕೇಂದ್ರ ಕಾರ್ಯದರ್ಶಿ ಡಾ.ಎಂ.ಎಸ್ ಮದಭಾವಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಅಶೋಕ ವಾರದ ಮುಖ್ಯ ಅತಿಥಿಗಳಾಗಿ, ಚಿದಂಬರ ಬಂಡಗರ ಅಭಿನಂದನ ನುಡಿ ಆಡಲಿದ್ದಾರೆ ಎಂದರು. ಈ ವೇಳೆ ನ್ಯೂಜಿಲೆಂಡ್ ಬಸವ ಸಮಿತಿಯ ಸಂಸ್ಥಾಪಕರಾದ ಡಾ.ಲಿಂಗಣ್ಣ ಕಲಬುರ್ಗಿ, ಫೌಂಡೇಶನ್ ಸ್ಥಾಯಿ ಸಮಿತಿಯ ಸದಸ್ಯರಾದ ಶಿವಣ್ಣಪ್ಪ ಗವಸಾನೆ, ಶಿವಾನಂದ ಕಲಬುರ್ಗಿ ಉಪಸ್ಥಿತರಿದ್ದರು.




