ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಭರ್ಜರಿ ಮಳೆಯಿಂದ ಸಿಲಿಕಾನ್ ಸಿಟಿಯ ಬಹುತೇಕ ವಾರ್ಡ್ ಗಳು ಹಾನಿಗೊಳಗಾಗಿದ್ದು, ಬಿಜೆಪಿ ನಾಯಕರು ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್, ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಹಲವು ನಾಯಕರು ಭೇಟಿ ನೀಡಿದರು. ಎರಡು ವರ್ಷಗಳಲ್ಲಿ ಬ್ರ್ಯಾಂಡ್ ಬೆಂಗಳೂರು ಅಲ್ಲ ಬ್ಯಾಡ್ ಬೆಂಗಳೂರು ಮಾಡಿದ್ದೇ ಸರ್ಕಾರದ ಸಾಧನೆ ಎಂದು ವಿಜಯೇಂದ್ರ ವಾಗ್ದಾಳಿ ನಡೆಸಿದರು.
ಅಧಿಕಾರಕ್ಕೆ ಬಂದು ಎರಡು ವರ್ಷವಾಗಿದೆ. ಒಂದೇ ಒಂದು ಅಭಿವೃದ್ಧಿ ಕೆಲಸವಿಲ್ಲ. ಜನರಿಗೆ ನೀಡಿದ ಆಶ್ವಾಸನೆ ಈಡೇರಿಸದೆ ಬೆಲೆ ಏರಿಕೆ ಬರೆ ಎಳೆದಿದೆ. ಇದೀಗ ಮಳೆಯಿಂದ ಸಮಸ್ಯೆಗೆ ಸಿಲುಕಿದ ಜನರ ಕಷ್ಟ ಕೇಳುವ ಬದಲು ಆಡಂಬರದ ಸಮಾವೇಶ, ಜಾಹೀರಾತು ಮೂಲಕ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದೆ. ಬೆಂಗಳೂರು ಉಸ್ತುವಾರಿ ಹೊತ್ತಿರುವ ಉಪ ಮುಖ್ಯಮಂತ್ರಿಗಳು ಮೂಲಭೂತ ಸೌಕರ್ಯ ಕಲ್ಪಿಸದೆ ಜನರಿಗೆ ನಿತ್ಯ ನರಕ ನಗರವಾಗಿಸಿದ್ದಾರೆ. ಇನ್ನಾದರೂ ಜನರ ಸಂಕಷ್ಟ ಕೇಳಲಿ ಎಂದು ಕಿಡಿ ಕಾರಿದರು.