ಪ್ರಜಾಸ್ತ್ರ ಸುದ್ದಿ
ನವದೆಹಲಿ(New delhi): ದೇಶದಲ್ಲಿ ಸಾಕಷ್ಟು ಸದ್ದು ಮಾಡಿದ ಉನ್ನಾವೋ ಅತ್ಯಾಚಾರ ಪ್ರಕರಣದ ಆರೋಪಿ ಬಿಜೆಪಿ ಮಾಜಿ ಶಾಸಕ ಕುಲದೀಪ್ ಸಿಂಗಾರ್ ಗೆ ದೆಹಲಿ ಹೈಕೋರ್ಟ್ ನೀಡಿದ್ದ ಷರತ್ತುಬದ್ಧ ಜಾಮೀನು ಆದೇಶಕ್ಕೆ ಸುಪ್ರೀಂ ಕೋರ್ಟ್ ಡಿಸೆಂಬರ್ 29 ಸೋಮವಾರ ತಡೆ ನೀಡಿದೆ. ಹೈಕೋರ್ಟ್ ಆದೇಶ ಪ್ರಶ್ನಿಸಿ ಸಿಬಿಐ ಹಾಗೂ ವಕೀಲರಾದ ಪೂಜಾ ಶಿಲ್ಪಾಕರ್, ಅಂಜಲಿ ಪಟೇಲ್ ಮೇಲ್ಮನವಿ ಸಲ್ಲಿಸಿದ್ದರು.
ಇದೀಗ ಸುಪ್ರೀಂ ಕೋರ್ಟ್ ಆರೋಪಿ ಕುಲದೀಪ್ ಸಿಂಗಾರ್ ಗೆ ನೋಟಿಸ್ ನೀಡಿದೆ. 2017ರಲ್ಲಿ 17 ವರ್ಷದ ಬಾಲಕಿ ಮೇಲೆ ಈ ಘಟನೆ ನಡೆದಿದ್ದು, ದೆಹಲಿಯ ವಿಚಾರಣಾ ನ್ಯಾಯಾಲಯ 2019ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ಬಗ್ಗೆ ಆರೋಪಿ ಮೇಲ್ಮನವಿ ಸಲ್ಲಿಸಿದ್ದು, ದೆಹಲಿ ಹೈಕೋರ್ಟ್ ಶಿಕ್ಷೆಯನ್ನು ಅಮಾನತಿನಲ್ಲಿಟ್ಟು ಡಿಸೆಂಬರ್ 23 ಷರತ್ತುಬದ್ಧ ಜಾಮೀನು ನೀಡಿದೆ. ಇದನ್ನು ಖಂಡಿಸಿ ಸಂತ್ರಸ್ತೆ ತಾಯಿ, ಮಹಿಳಾ ಹೋರಾಟಗಾರರು ದೆಹಲಿ ಹೈಕೋರ್ಟ್ ಮುಂದೆ ಪ್ರತಿಭಟನೆ ನಡೆಸಿದ್ದರು. ಇನ್ನು ಸಂತ್ರಸ್ತೆಯ ತಂದೆ ಕಸ್ಟಡಿ ಸಾವು ಪ್ರಕರಣದಲ್ಲಿ ಸಿಂಗಾರ್ ಗೆ 10 ವರ್ಷ ಶಿಕ್ಷೆ ನೀಡಿದೆ. ಹೀಗಾಗಿ ಜೈಲಿನಲ್ಲಿ ಇರುತ್ತಾನೆ ಎಂದು ಹೇಳಿತ್ತು.




