ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಮನೆಗಳ್ಳರ ಹಾವಳಿ ನಡುವೆ ಇದೀಗ ಸಾರ್ವಜನಿಕರಲ್ಲಿ ಮತ್ತಷ್ಟು ಆತಂಕ ಮೂಡುವ ಪರಿಸ್ಥಿತಿ ಬಂದಿದೆ. ವಿಜಯಪುರ ಜಿಲ್ಲೆಯಲ್ಲಿ 10 ರಿಂದ 15 ಜನರ ಡಕಾಯಿತರ ಗುಂಪೊಂದು ಬಂದಿದ್ದು, ಒಂಟಿ ಮನೆಗಳಿಗೆ ಹೋಗಿ ಮನೆಯಲ್ಲಿರುವ ಜನರಿಗೆ ಆಯುಧ ತೋರಿಸಿ ಸುಲಿಗೆ ಮಾಡುತ್ತಾರೆ. ಕೊಡಲು ಒಪ್ಪದೆ ಇದ್ದಾಗ ಜೀವಕ್ಕೆ ಅಪಾಯ ಮಾಡಲು ಹಿಂದು ಮುಂದು ನೋಡುವುದಿಲ್ಲವೆಂದು ಪೊಲೀಸ್ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹೀಗಾಗಿ ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ತಿಳಿಸಲಾಗಿದೆ.
ಹೊಲಗಳಲ್ಲಿ ಮನೆ ಮಾಡಿಕೊಂಡಿರುವವರು, ಗ್ರಾಮೀಣ ಭಾಗದಲ್ಲಿ ಒಂಟಿ ಮನೆಯಿರುವವರು ಎಚ್ಚರಿಕೆಯಿಂದ ಇರಬೇಕು. ಹಳ್ಳಿಗಳಲ್ಲಿ ಅನುಮಾನಸ್ಪದ ರೀತಿಯಲ್ಲಿ ವ್ಯಕ್ತಿಗಳು ತಿರುಗಾಡುವುದು ಕಂಡು ಬಂದರೆ ಕೂಡಲೇ ಅವರನ್ನು ವಿಚಾರಿಸಬೇಕು. ಸಂಶಯ ಬಂದರೆ ಪೊಲೀಸ್ ಠಾಣೆಗೆ, 112 ನಂಬರ್ ಗೆ ಮಾಹಿತಿ ನೀಡಬೇಕು. ಈ ಗ್ಯಾಂಗ್ ಸಿಗುವವರೆಗೂ 8-10 ಜನರ ಗುಂಪುಗಳನ್ನು ಮಾಡಿಕೊಂಡು ತಮ್ಮ ಗ್ರಾಮಗಳನ್ನು ಕಾವಲು ಕಾಯಬೇಕು. ಈ ವಿಚಾರದಲ್ಲಿ ಪೊಲೀಸರೊಂದಿಗೆ ಸಹಕಾರ ನೀಡಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.