ಪ್ರಜಾಸ್ತ್ರ ಸುದ್ದಿ
ಬಳ್ಳಾರಿ(Ballari): ಜನವರಿ 25ರಂದು ಸಿಸೇರಿಯನ್ ಮೂಲಕ ಮಹಾದೇವಿ ಎಂಬುವರಿಗೆ ವಿಮ್ಸ್ ನಲ್ಲಿ(VIMS) ಹೆರಿಗೆಯಾಗಿದೆ. ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ, ಕಳೆದ ಮೂರು ದಿನಗಳಿಂದ ಬಾಣಂತಿ ಅಸ್ವಸ್ಥರಾಗಿದ್ದಾರೆ. ಸೋಂಕು ಹಾಗೂ ವಿಪರೀತ ಜ್ವರದಿಂದ ಬಾಣಂತಿ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಹೇಳುತ್ತಿದ್ದಾರೆ. ಆದರೆ, ವೈದ್ಯರು ಸರಿಯಾಗಿ ಚಿಕಿತ್ಸೆ ಕೊಟ್ಟಿಲ್ಲ. ಅವರ ನಿರ್ಲಕ್ಷ್ಯದಿಂದಾಗಿಯೇ ಪತ್ನಿ ಮೃತಪಟ್ಟಿದ್ದಾಳೆ ಎಂದು ಮಹಾದೇವಿ ಪತಿ ನದೀಶ್ ಆರೋಪಿಸಿದ್ದಾರೆ.
ಕುರುಗೋಡು ತಾಲೂಕಿನ ಕೋಳೂರು ಗ್ರಾಮದ ನಂದೀಶ್ ಪತ್ನಿ ಮಹಾದೇವಿಯನ್ನು(21) ಹೆರಿಗೆಗಾಗಿ ಇತ್ತೀಚೆಗೆ ವಿಮ್ಸ್ ಗೆ ದಾಖಲಿಸಲಾಗಿತ್ತು. ಜನವರಿ 25ರಂದು ಸಿಸೇರಿಯನ್ ಆಗುವ ಮೊದಲು ಚೆನ್ನಾಗಿಯೇ ಇದ್ದರು. ಹೆರಿಗೆಯಾದ(Delivery) ಎರಡ್ಮೂರು ದಿನಗಳ ಕಾಲ ಸಹ ಚೆನ್ನಾಗಿದ್ದರು. ಈಗ ನೋಡಿದರೆ ಸೋಂಕು ಹಾಗೂ ವಿಪರೀತ ಜ್ವರದಿಂದ ಮೃತಪಟ್ಟಿದ್ದಾರೆ ಎನ್ನುತ್ತಿದ್ದಾರೆ. ಆಪರೇಷನ್ ವೇಳೆ ಬಳಸಿದ ಸಾಧನಗಳನ್ನು ಸರಿಯಾಗಿ ಸ್ವಚ್ಛಗೊಳಿಸದೆ ಇರುವುದರಿಂದ ಹೀಗಾಗಿದೆ ಎಂದು ವಿಮ್ಸ್ ಸಿಬ್ಬಂದಿಯಾಗಿರುವ ಮಹಾದೇವಿ ಸಹೋದರ ಹೇಳುತ್ತಿದ್ದಾರೆ. ಮಗಳನ್ನು ಕಳೆದುಕೊಂಡ ಕುಟುಂಬಸ್ಥರು, ಪತ್ನಿಯನ್ನು ಕಳೆದುಕೊಂಡು ಪತಿ ಕಣ್ಣೀರು ಹಾಕುತ್ತಿದ್ದು, ವೈದ್ಯರ ನಿರ್ಲಕ್ಷ್ಯದಿಂದಲೇ ಹೀಗಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.