ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belagavi): ಕೆಎಸ್ಆರ್ ಟಿಸಿ ಬಸ್ ಕಂಡಕ್ಟರ್ ಮೇಲಿನ ಹಲ್ಲೆ ಪ್ರಕರಣ ಕನ್ನಡ ಹಾಗೂ ಮರಾಠಿ ಭಾಷೆಯ ನಡುವಿನ ಜಗಳವೆಂದು ಕೇಳಿ ಬಂದಿತು. ನಂತರ ಕಂಡಕ್ಟರ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಯಿತು. ಹೀಗಾಗಿ ಬಸ್ ನಲ್ಲಿ ನಡೆದ ಸಣ್ಣದೊಂದು ಜಗಳ ಎರಡು ರಾಜ್ಯಗಳ ನಡುವೆ ಸಮಸ್ಯೆ ಸೃಷ್ಟಿಸಿತು. ಇದೀಗ ಬಾಲಕಿ ಕುಟುಂಬಸ್ಥರು ಮಾತನಾಡಿದ್ದು, ಬೆಳಗಾವಿಯಿಂದ ಬಾಳೇಕುಂದ್ರಿಗೆ ಬರುವಾಗ ಟಿಕೆಟ್ ವಿಚಾರಕ್ಕೆ ಜಗಳವಾಗಿದೆ. ಇದನ್ನು ಕೆಲವರು ಕನ್ನಡ ಮರಾಠಿ ಎಂದು ಹಬ್ಬಿಸಿದ್ದಾರೆ. ನಾವು ಕನ್ನಡ ಅಭಿಮಾನಿಗಳು ಎಂದಿದ್ದಾರೆ.
ಈ ಗಲಾಟೆಯಿಂದ ಕರ್ನಾಟಕ, ಮಹಾರಾಷ್ಟ್ರ ನಡುವೆ ಜಗಳ ಶುರುವಾಗಿದೆ. ಇದರಲ್ಲಿ ನಮ್ಮ ಮಗಳಿಗೆ ಅನ್ಯಾಯವಾಗಿದೆ. ನಾವು ದಾಖಲಿಸಿದ್ದ ಪ್ರಕರಣವನ್ನು ವಾಪಸ್ ಪಡೆಯುತ್ತೇವೆ. ಇದರಲ್ಲಿ ಯಾರ ಒತ್ತಡವಿಲ್ಲ. ಸ್ವಇಚ್ಛೆಯಿಂದ ದೂರು ಹಿಂದಕ್ಕೆ ಪಡೆಯುತ್ತಿದ್ದು, ಇದನ್ನು ಇಲ್ಲಿಗೆ ನಿಲ್ಲಿಸಿ ಎಂದು ಮನವಿ ಮಾಡಿದ್ದಾರೆ. ಈ ಪ್ರಕರಣದಲ್ಲಿ ಕಂಡಕ್ಟರ್ ಮಹಾದೇವಪ್ಪ ಹುಕ್ಕೇರಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿದ್ದ ಸಿಪಿಐ ವರ್ಗಾವಣೆ ಮಾಡಲಾಗಿದೆ. ಕರ್ನಾಟಕ ಹಾಗೂ ಮಹಾರಾಷ್ಟ್ರ ನಡುವೆ ಬಸ್ ಸಂಚಾರ ಸಮಸ್ಯೆಯಾಗಿದೆ.