ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belagavi): ಶಾಸಕ ಅಭಯ್ ಪಾಟೀಲ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ(ಟಿ.ಎ ನಾರಾಯಣಗೌಡ ಬಣ) ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಮಹಾನಗರ ಪಾಲಿಕೆ ಕಚೇರಿ ಮುತ್ತಿಗೆ ಹಾಕಲು ಗುರುವಾರ ಪ್ರಯತ್ನಿಸಿದರು. ಈ ವೇಳೆ ಪೊಲೀಸರು ಅವರನ್ನು ವಶಕ್ಕೆ ಪಡೆದರು. ಇತ್ತೀಚೆಗೆ ಸಾಕಷ್ಟು ವಿರೋಧದ ನಡುವೆ ಸಂಭಾಜಿ ಮಹಾರಾಜರ ಪ್ರತಿಮೆ ಉದ್ಘಾಟನೆ ಸಂದರ್ಭದಲ್ಲಿ ಮಹಾರಾಷ್ಟ್ರದ ಸಚಿವ ಶಿವೇಂದ್ರರಾಜೇ ಬೋಸ್ಲೆ, ಜೈ ಮಹಾರಾಷ್ಟ್ರ ಎಂದು ಘೋಷಣೆ ಕೂಗಿದರು. ಆಗ ಅಲ್ಲೇ ಇದ್ದ ಶಾಸಕ ಅಭಯ್ ಪಾಟೀಲ ವಿರೋಧ ವ್ಯಕ್ತಪಡಿಸಿಲ್ಲ. ಹೀಗಾಗಿ ಇವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.
ಆಗಾಗ ಬೆಳಗಾವಿಗೆ ಬರುವ ಮಹಾರಾಷ್ಟ್ರದ ಸಚಿವರು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವ ಮೂಲಕ ಗಡಿಯಲ್ಲಿ ಸಮಸ್ಯೆ ಮಾಡುತ್ತಿದ್ದಾರೆ. ಈ ಮೂಲಕ ಕನ್ನಡಿಗರು ಹಾಗೂ ಮರಾಠಿಗರ ನಡುವೆ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದ್ದು, ಅವರ ವಿರುದ್ಧ ಕ್ರಮವಾಗಬೇಕು ಎಂದು ಒತ್ತಾಯಿಸಿದರು. ರಾಣಿ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಅಲ್ಲಿಂದ ಮಹಾನಗರ ಪಾಲಿಕೆ ತನಕ ಮೆರವಣಿಗೆ ನಡೆಸಿ ಕಚೇರಿ ಮುತ್ತಿಗೆ ಹಾಕಲು ಯತ್ನಿಸಿದರು.