ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belagavi): ಬೆಳಗಾವಿಯಿಂದ 19 ಜನರ ತಂಡ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭಳಕ್ಕೆ ಹೊರಟಿದ್ದ ವಾಹನ ಅಪಘಾತಗೊಂಡಿದೆ. ಇದರಲ್ಲಿ ನಾಲ್ವರು ಹಾಗೂ ಸ್ಥಳೀಯ ಬೈಕ್ ಸವಾರರಿಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಶುಕ್ರವಾರ ಮುಂಜಾನೆ ಈ ಘಟನೆ ನಡೆದಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಗಾವಿಯ ಗಣೇಶಪುರದ ನಿವಾಸಿಗಳಾದ ನೀತಾ, ಸಾಗರ ಮೃತರೆಂದು ತಿಳಿದು ಬಂದಿದೆ. ಇನ್ನುಬ್ಬರು ಹಾಗೂ ಸ್ಥಳೀಯರಿಬ್ಬರ ಮಾಹಿತಿ ತಿಳಿದು ಬರಬೇಕಿದೆ.
ಮಧ್ಯಪ್ರದೇಶದ ಇಂದೊರ್ ಮಾಣಪುರ ಹತ್ತಿರ ಅಪಘಾತ ಸಂಭವಿಸಿದೆ. ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆಯಂತೆ. ಅಲ್ಲಿನ ಬಿಜೆಪಿ ಜಿಲ್ಲಾಧ್ಯಕ್ಷರು ಗಾಯಾಳುಗಳ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ ಎಂದು ತಿಳಿದು ಬಂದಿದೆ. ಇದರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಅಂತಾ ಎಂಜಿಎಂ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.