ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಫೆಬ್ರವರಿ 11ರ ರಾತ್ರಿ ನಗರದ ಮದೀನಾ ನಗರದಲ್ಲಿ ರೌಡಿ ಭಾಗಪ್ಪ ಹರಿಜನ ಹತ್ಯೆಯ ನಾಲ್ವರು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ. ಈ ಬಗ್ಗೆ ಎಸ್ಪಿ ಲಕ್ಷ್ಮಣ ನಿಂಬರಗಿ ಮಾಧ್ಯಮಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಈ ಕೃತ್ಯ ಸಂಬಂಧ ಹಲವಾರು ತಂಡಗಳನ್ನು ರಚನೆ ಮಾಡಿ ಆರೋಪಿಗಳ ಪತ್ತೆಗೆ ಮುಂದಾಗಿದ್ದು, 6 ತಿಂಗಳ ಹಿಂದೆ ಕೊಲೆಯಾದ ರವಿ ಮೇಲಿನಕೇರಿ ಸಹೋದರ ಪ್ರಕಾಶ್ ಅಲಿಯಾಸ್ ಪಿಂಟು ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ.
ಪ್ರಕಾಶ್ ಮೇಲಿನಕೇರಿ, ರಾಹುಲ್ ಭೀಮಾಶಂಕರ ತಳಕೇರಿ, ಸುದೀಪ ಕಾಂಬಳೆ ಹಾಗೂ ಮಣಿಕಂಠ ಬೆನಕೊಪ್ಪ ಬಂಧಿತ ಆರೋಪಿಗಳಾಗಿದ್ದಾರೆ. ರವಿ ಮೇಲಿನಕೇರಿ ಹಾಗೂ ಭಾಗಪ್ಪ ಹರಿಜನ ನಡುವೆ ವ್ಯವಹಾರವಿತ್ತು. ಭಾಗಪ್ಪನ ಹೆಸರು ಹೇಳಿಕೊಂಡು ರವಿ ಹಣ ಮಾಡಿಕೊಂಡಿದ್ದನಂತೆ. ಇದೇ ವಿಚಾರಕ್ಕೆ ಜಗಳವಾಗಿದೆ. ರವಿ ತಮ್ಮ ಪಿಂಟ್ಯಾ ಅಲಿಯಾಸ್ ಪ್ರಕಾಶಗೆ ಭಾಗಪ್ಪ ಬೆದರಿಕೆ ಹಾಕಿದ್ದನಂತೆ. 10 ಕೋಟಿ ರೂಪಾಯಿ ಕೊಡಬೇಕು. ಇಲ್ಲದಿದ್ದರೆ ನಿನ್ನ ಅಣ್ಣನಿಗೆ ಆದ ಗತಿ ನೀನಗೂ ಆಗುತ್ತೆ ಎಂದು. ತನ್ನ ಅಣ್ಣನ ಸಾವಿಗೆ ಭಾಗಪ್ಪ ಕಾರಣವೆಂದು ಈ ಕೃತ್ಯ ಎಸಗಲಾಗಿದೆ ಎನ್ನುವ ಮಾಹಿತಿಯನ್ನು ಪೊಲೀಸ್ ವರಿಷ್ಠಾಧಿಕಾರಿಗಳು ನೀಡಿದ್ದಾರೆ.