ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ರಾಜ್ಯ ಕಾಂಗ್ರೆಸ್ ಸರ್ಕಾರ ಎರಡು ಪೂರ್ಷ ಪೂರ್ಣಗೊಳಿಸಿರುವ ಹಿನ್ನಲೆಯಲ್ಲಿ ಮೇ 20ರಂದು ಹೊಸಪೇಟೆಯಲ್ಲಿ ಬೃಹತ್ ಸಮಾವೇಶ ನಡೆಸಲಾಗುತ್ತಿದೆ. ಇದರ ಪೂರ್ವಭಾವಿ ಸಭೆಯನ್ನು ಸಿಂದಗಿಯಲ್ಲಿ ನಡೆಸಲಾಯಿತು. ಇಲ್ಲಿಂದ 4 ರಿಂದ 5 ಸಾವಿರ ಜನರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ ಹೇಳಿದರು. ಪಕ್ಷದ ಕಚೇರಿಯಲ್ಲಿ ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ಎರಡು ವರ್ಷಗಳ ಸಾಧನೆ ಕುರಿತು ಜನರಿಗೆ ತಿಳಿಸಲಾಗುವುದು ಎಂದರು.
1 ಲಕ್ಷ ಜನರಿಗೆ ಹಕ್ಕುಪತ್ರ ವಿತರಣೆ ಮಾಡಲಾಗುತ್ತಿದೆ. ಇದರಲ್ಲಿ 15 ಸಾವಿರ ಜನರು ವಿಜಯಪುರ ಜಿಲ್ಲೆಯವರಾಗಿದ್ದಾರೆ. ಇನ್ನು ಶಾಸಕ ಅಶೋಕ ಮನಗೂಳಿಯವರು ಸಿಂದಗಿ ಪುರಸಭೆಯಲ್ಲಿ ನಗರಸಭೆಯಾಗಿ ಮೇಲ್ದರ್ಜೆಗೆ ಏರಿಸಬೇಕು ಎನ್ನುವ ಪ್ರಸ್ತಾವನೆ ಸಲ್ಲಿಸಿದ್ದಾರೆ. ರಾಜ್ಯದಲ್ಲಿನ ಪುರಸಭೆಗಳನ್ನು ನಗರಸಭೆಯಾಗಿ ಮೇಲ್ದರ್ಜೆಗೆ ಏರಿಸುವ ಸಂದರ್ಭದಲ್ಲಿ ಮೊದಲ ಸಾಲಿನಲ್ಲಿ ಸಿಂದಗಿ ಇರಲಿದೆ. ಸಿಂದಗಿ, ಆಲಮೇಲ ಅಭಿವೃದ್ಧಿಗೆ 100 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಬಿಜೆಪಿಯವರು ಮಾಡಿದ ಸಾಲ ತೀರಿಸುವುದರ ಜೊತೆಗೆ ನಮ್ಮ ಐದು ಗ್ಯಾರೆಂಟಿಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದೇವೆ ಅಂತಾ ಹೇಳಿದರು.
ಇದಕ್ಕೂ ಮೊದಲು ಸಿಂದಗಿ, ಆಲಮೇಲ ಭಾಗದ ಮುಖಂಡರು, ಕಾರ್ಯಕರ್ತರೊಂದಿಗೆ ಸಮಾವೇಶ ಪೂರ್ವಭಾವಿ ಸಭೆ ನಡೆಸಲಾಯಿತು. ಈ ವೇಳೆ ಶಾಸಕ ಅಶೋಕ ಮನಗೂಳಿ, ಮಾಜಿ ಶಾಸಕ ಶರಣಪ್ಪ ಸುಣಗಾರ, ಸಿಂದಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರಿ, ಆಲಮೇಲ ಅಧ್ಯಕ್ಷ ಸಾದಿಕ್ ಸುಂಬಡ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಮಲ್ಲಣ್ಣ ಸಾಲಿ, ನಗರ ಯೋಜನಾ ಪ್ರಾಧಿಕಾರದ ತಾಲೂಕಾಧ್ಯಕ್ಷ ಬಸವರಾಜ ಕಾಂಬಳೆ, ಮಹಿಳಾ ಘಟಕದ ಅಧ್ಯಕ್ಷೆ ಜಯಲಕ್ಷ್ಮಿ ಹದ್ನೂರ, ಸುನಂದಾ ಯಂಪೂರೆ, ಪ್ರತಿಭಾ ಚಳ್ಳಗಿ, ಚಂದ್ರಶೇಖರ ದೇವರೆಡ್ಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.