ಪ್ರಜಾಸ್ತ್ರ ಸುದ್ದಿ
ಚಿಕ್ಕೋಡಿ(Chikkodi): ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ನಿಪ್ಪಾಣಿ ತಾಲೂಕಿನ ತವಂದಿ ಗ್ರಾಮದಲ್ಲಿ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಸುಮಾರು 20 ಲಕ್ಷ ರೂಪಾಯಿ ವೆಚ್ಚದಲ್ಲಿ ಮಂಜೂರಾದ ಮಾಜಿ ಸೈನಿಕರ ಭವನ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಸಂಸದರು, ದೇಶರಕ್ಷಣೆಗೆ ಅಮೂಲ್ಯ ಸೇವೆ ಸಲ್ಲಿಸಿದ ಮಾಜಿ ಸೈನಿಕರ ಗೌರವ ಮತ್ತು ಸೌಲಭ್ಯಗಳನ್ನು ಇನ್ನಷ್ಟು ಬಲಪಡಿಸುವ ಮಹತ್ವದ ಕಾರ್ಯ ಇದಾಗಿದೆ. ನಿರ್ಮಾಣವಾಗುತ್ತಿರುವ ಭವನವು ಶೀಘ್ರದಲ್ಲೇ ಪೂರ್ಣಗೊಂಡು, ಮಾಜಿ ಸೈನಿಕರು ಹಾಗೂ ಅವರ ಕುಟುಂಬಗಳಿಗೆ ಉಪಯುಕ್ತವಾಗಲಿ ಎಂದು ಹೇಳಿದರು.
ಕರ್ನಾಟಕ ನೆಲದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡವೇ ಮಾಯವಾಗಿತ್ತು. ಯಾಕಂದರೆ, ಚಿಕ್ಕೋಡಿ ಲೋಕಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿನ ಅನುದಾನದ ಕಾರ್ಯಕ್ರಮವಿದು. ನಿಪ್ಪಾಣಿ ಇರುವುದು ಬೆಳಗಾವಿಯಲ್ಲಿ. ಆದರೆ, ವೇದಿಕೆ ಮೇಲೆ ಅಳವಿಡಿಸಿದ್ದ ಬ್ಯಾನರ್ ಮಾತ್ರ ಮರಾಠಿಯಲ್ಲಿ. ಆದರೂ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಭೂಮಿ ಪೂಜೆ ಮಾಡಿದ್ದಾರೆ. ಇನ್ನು ಖಾನಾಪುರದ ಕಾಂಗ್ರೆಸ್ ಮಾಜಿ ಶಾಸಕಿ ಹಾಗೂ ವಕ್ತಾರರಾದ ಅಂಜಲಿ ನಿಂಬಾಳ್ಕರ್ ಅವರ ಗೃಹ ಕಚೇರಿಯಲ್ಲಿ ಅಳವಡಿಸಿರುವ ಬೋರ್ಡ್ ನಲ್ಲಿಯೂ ಕನ್ನಡವಿಲ್ಲ. ಕನ್ನಡಿಗರು, ಕನ್ನಡಪರ ಸಂಘಟನೆಗಳು ಅಷ್ಟೊಂದು ಹೋರಾಟ ಮಾಡುತ್ತಿದ್ದರೂ ಜನಪ್ರತಿನಿಧಿಗಳ ಇಂತಹ ವರ್ತನೆಯಿಂದ, ಮರಾಠಿ ಭಾಷಿಕರ ಪ್ರಾಬಲ್ಯ ಹೆಚ್ಚಿಗಿದೆ ಎಂದು ರಾಜಕಾರಣಿಗಳು ಅವರಿಗೆ ಮಣಿಯುತ್ತಿರುವುದರಿಂದ ನಾಡಿಗೆ ಹಿನ್ನಡೆಯಾಗುತ್ತಿರುವುದು ಮಾತ್ರ ಸತ್ಯ.

ಈ ಸಂದರ್ಭದಲ್ಲಿ ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಮುಖಂಡರಾದ ಉತ್ತಮ ಪಾಟೀಲ, ಸುಪ್ರಿಯಾ ಪಾಟೀಲ, ಸುಜಯ ಪಾಟೀಲ, ತವಂದಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಲಕ್ಷ್ಮೀ ಕಾಂಬಳೆ, ಉಪಾಧ್ಯಕ್ಷ ಸಂಜಯ ಪಾಟೀಲ ಸೇರಿದಂತೆ ನಿಪ್ಪಾಣಿ ತಾಲೂಕಿನ ಮಾಜಿ ಸೈನಿಕರು ಹಾಗೂ ಗ್ರಾಮದ ಹಿರಿಯರು ಉಪಸ್ಥಿತರಿದ್ದರು.





