ಪ್ರಜಾಸ್ತ್ರ ಸುದ್ದಿ
ಬೀದರ(Bidara): ಎಟಿಎಂಗೆ ಹಣ ತುಂಬುತ್ತಿದ್ದ ವೇಳೆ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಕಣ್ಣಿಗೆ ಕಾರದಪುಡಿ ಎರಚಿ ಗುಂಡಿನ ದಾಳಿ ನಡೆಸಿ 93 ಲಕ್ಷ ರೂಪಾಯಿ ದೋಚಿ ಪರಾರಿಯಾದ ಘಟನೆ ಗುರುವಾರ ನಗರದಲ್ಲಿ ನಡೆದಿದೆ. ಈ ವೇಳೆ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಮತ್ತೊಬ್ಬರು ಗಾಯಗೊಂಡಿದ್ದಾರೆ. ಎಸ್ ಬಿಐ ಸೆಕ್ಯೂರಿಟಿ ಏಜೆನ್ಸಿ ಸಿಬ್ಬಂದಿ ಮೇಲೆ ಕಾರದ ಪುಡಿ ಎರೆಚಿ ಈ ಕೃತ್ಯವೆಸಗಲಾಗಿದೆ. ಚಿದ್ರಿ ನಿವಾಸಿ ಗಿರಿ ವೆಂಕಟೇಶ್ ಮೃತ ವ್ಯಕ್ತಿಯೆಂದು ಗುರುತಿಸಲಾಗಿದೆ.
ಜಿಲ್ಲಾ ನ್ಯಾಯಾಲಯ ಹಾಗೂ ಜಿಲ್ಲಾಧಿಕಾರಿ ಕಚೇರಿಗೆ ಹೊಂದಿಕೊಂಡತೆ ಇರುವ ಎಸ್ ಬಿಐ ಮುಖ್ಯ ಕಚೇರಿ ಹತ್ತಿರದ ಎಟಿಎಂಗೆ ಹಣ ತುಂಬಲು ಏಜೆನ್ಸಿಯವರು ಮುಂಜಾನೆ 10.30ರಿಂದ 11 ಗಂಟೆ ಸುಮಾರಿಗೆ ಬಂದಿದ್ದಾರೆ. ಹಣ ತುಂಬುವ ವೇಳೆ ಅಲ್ಲಿಗೆ ಬಂದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದಾಗ ಓರ್ವ ಮೃತಪಟ್ಟಿದ್ದಾರೆ. ಇನ್ನೊಬ್ಬರು ಗಾಯಗೊಂಡಿದ್ದಾರೆ. ಟ್ರಂಕ್ ತೆಗೆದು 93 ಲಕ್ಷ ರೂಪಾಯಿ ದೋಚಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಎಸ್ಪಿ ಸೇರಿ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.