Ad imageAd image

‘ಬಿಜಾಪುರ ಭವ್ಯ ಪರಂಪರೆ’–ನನ್ನ ಹೃದಯದ ಹಾದಿ

Nagesh Talawar
‘ಬಿಜಾಪುರ ಭವ್ಯ ಪರಂಪರೆ’–ನನ್ನ ಹೃದಯದ ಹಾದಿ
WhatsApp Group Join Now
Telegram Group Join Now

ಪ್ರಜಾಸ್ತ್ರ ವಿಶೇಷ

ಪೊಲೀಸ್ ಇಲಾಖೆಯಲ್ಲಿರುವ ನಾಗರಾಜ ಕಾಪಸಿ ಅವರೊಳಗೊಬ್ಬ ಸಾಹಿತಿ, ಸಂಶೋಧಕನಿದ್ದಾನೆ. ಅವರೊಳಗೆ ಇತಿಹಾಸದ ಹುಡುಕಾಟದ ತೀವ್ರತೆಯಿದೆ. ಅದರ ಫಲವಾಗಿ ಬಿಜಾಪುರ ಭವ್ಯ ಪರಂಪರೆ ಅನ್ನೋ ಪುಸ್ತಕ ಜನ್ಮ ತಾಳಿದ್ದು, ಅದರ ಬಗ್ಗೆ ಸ್ವತಃ ಲೇಖಕರು ತಮಗಾದ ಅನುಭವವನ್ನು ಇಲ್ಲಿ ಹೇಳಿಕೊಂಡಿದ್ದಾರೆ. ಇದನ್ನು ಪ್ರವಾಸಕಥನ, ಅನುಭವ, ಹುಡುಕಾಟ, ಸಂಶೋಧನೆ, ಭಾವನೆಗಳ ಪಯಣ ಎಂದಿದ್ದಾರೆ.

ಪೊಲೀಸ್ ಆಗಿರುವುದು ನನ್ನ ವೃತ್ತಿ. ಆದರೆ ಐತಿಹಾಸಿಕ ಸ್ಥಳಗಳು, ಮಣ್ಣಿನ ಸುವಾಸನೆ, ಕಲ್ಲಿನ ಮೇಲೆ ಕೆತ್ತಿದ ಅಕ್ಷರಗಳು, ಕಾಲದ ಮೌನ ಗುರುತುಗಳು, ಹಾಗೂ ಪುಸ್ತಕಗಳ ಪರಿಮಳ ಇವೆಲ್ಲವೂ ನನ್ನ ಜೀವಾಳ. ಡ್ಯೂಟಿ ಮುಗಿಸಿಕೊಂಡು ಬರುವಂತೆ ಎಲ್ಲರೂ ಮನೆಗೆ ಹೋದರೆ, ನಾನು ಇತಿಹಾಸದ ಕಡೆಗೆ ಹೊರಟವನು. ವಿಷಣ್ಣತೆಯ ದಿನಗಳಲ್ಲಿ ಪುಸ್ತಕಗಳು ನನಗೆ ಬಂದಿದ್ದ ಸಾಂತ್ವನ; ಉತ್ಸಾಹದ ದಿನಗಳಲ್ಲಿ ಐತಿಹಾಸಿಕ ಗೋಡೆಗಳು ನನಗೆ ಕೊಟ್ಟಿದ್ದ ಪ್ರೇರಣೆ.

ಹೀಗೆ, ಕೆಲವು ವರ್ಷಗಳ ಹಿಂದೆ, ಒಂದು ಬೆಳಿಗ್ಗೆ ವಿಜಯಪುರದ ಆಕಾಶದಲ್ಲಿ ಸೂರ್ಯೋದಯವಾಗುತ್ತಿದ್ದಾಗ, ನಾನು ನನ್ನ ಮನಸ್ಸಿಗೆ ಹಠವಾಗಿ ಹೇಳಿಕೊಂಡೆ: “ಬಿಜಾಪುರವನ್ನು ಮತ್ತೆ ನೋಡಬೇಕು. ಈ ಬಾರಿ ಪ್ರವಾಸಿಗನಾಗಿ ಅಲ್ಲ, ಸಂಶೋಧಕನಾಗಿ. ಬೆಳಕು ಮತ್ತು ಮಣ್ಣಿನ ಮಧ್ಯೆ ಆರಂಭವಾದ ಈ ಸವಾರಿ ವಿಜಯಪುರವನ್ನು ಸುತ್ತಾಡಿದ ಮೊದಲ ದಿನ ಈಗಲೂ ನೆನಪಿದೆ. ಅಲ್ಲಿನ ಕಲ್ಲಿನ ಬಣ್ಣ, ಅದರ ಮೌನ, ಅದ್ಭುತ ಕಟ್ಟಡಗಳ ಕೌಶಲ್ಯ —all these seemed like they were waiting centuries just to whisper their stories to me.

ಗೋಲ್ ಗುಮ್ಮಟ್ —ಅದೊಂದು ಕಟ್ಟಡವಲ್ಲ; ಅದು ಶತಮಾನಗಳ ಹೊಣೆ ಹೊತ್ತ ಮೌನ ಸೈನಿಕನಂತೆ. ಅದರ ಒಳಗೆ ನಿಂತಾಗ ಕಿವಿಗೆ ಬಿದ್ದ ಪ್ರತಿಧ್ವನಿ ನನ್ನ ಸ್ವರವಾಗಿರಲಿಲ್ಲ— ಇತಿಹಾಸವೇ ನನ್ನನ್ನು ಗುರುತಿಸಿಕೊಂಡಂತೆ ಭಾಸವಾಯಿತು. ಇಬ್ರಾಹಿಂ ರೌಜಾ, ಮಾಲೀಕ್-ಏ- ಮೈದಾನ್, ಅಲಿ ಆದಿಲ್ ಶಾಹ್‌ ಅರಮನೆ, ಹಳೆಯ ಬಾವಿಗಳು, ಗಂಜಾಮ್‌, ಬಿಜಾಪುರದ ಕಡೆಯ ಹಳ್ಳಿಗಳಲ್ಲಿ ಮಣ್ಣಿನೊಳಗೆ ಅಡಗಿ ಬಿದ್ದಿದ್ದ ಮರೆಯಾದ ಕೋಟೆ ಗೋಡೆಗಳು, ಪ್ರತಿ ಸ್ಥಳವೂ, ಪ್ರತಿ ಕಲ್ಲೂ ನಾನು ಬರೆಯಬೇಕಾದ ಪುಸ್ತಕದ ಒಂದು ಪುಟವಾಗಿತ್ತು. ಕೆಲವರು ಅಪಹಾಸ್ಯವಾಗಿ “ಯಾಕೆ ಇವೆಲ್ಲ ಬರೆಯುತ್ತೀಯಪ್ಪ?” ಎಂದು ಕೇಳಿದವರು ಇದ್ದರು.

ಹೊತ್ತು ಹೊತ್ತಿಗೆ ಹೋದಂತೆ, ಸಂಗ್ರಹಿಸುತ್ತಿದ್ದ ಮಾಹಿತಿಗಳು ನನಗೆ ಭಾರವಾಗುತ್ತಿವೆಯೇನೋ ಎಂದು ಕೆಲವರು ಕೇಳಿದರು. ಕೆಲವರು ನಕ್ಕರು. ಕೆಲವರು ಮೆಚ್ಚಿದರು. ಕೆಲವರು “ಇವನ ಕೆಲಸಕ್ಕೆ ಯಾರು ಬೆಲೆ ಕೊಡತ್ತಾರೆ?” ಎಂದರು. ಆದರೆ ನನಗೆ ಇವರಾಡುವ ಮಾತುಗಳು  ಬೇಕಾಗಿರಲಿಲ್ಲ. ನನಗೆ ಬೇಕಾಗಿದ್ದು ಮಣ್ಣಿನ ಧ್ವನಿ, ಕಾಲದ ಗುರುತು, ಹಾಗೂ ನನ್ನ ಇತಿಹಾಸದ ಅಧ್ಯಯನ, ಮನಸ್ಸಿನ ತೃಪ್ತಿ. ಡ್ಯೂಟಿ ಮುಗಿದು ಸಂಜೆ ಬಂದಾಗ, ಬೇಸರವಾಗುವ ಬದಲು ನಾನು ಹೆಜ್ಜೆ ಹಾಕುತ್ತಿದ್ದೆ. ಕೈಯಲ್ಲಿ ಒಂದು ಚೀಲ, ಪೆನ್, ಪುಸ್ತಕ, ಕ್ಯಾಮೆರಾ ಮತ್ತು ಬಿಸಾಡಲಾಗದ ಕುತೂಹಲ ದಾಖಲೆಗಳು.

ಆ ರಾತ್ರಿ ಮನೆಗೆ ಹಿಂತಿರುಗುತ್ತಿದ್ದಾಗ, ನನ್ನ ಬಟ್ಟೆಗಳಲ್ಲಿ ಮಣ್ಣಿನ  ದುಳಾಗಿತ್ತು, ಆದರೆ ಮನಸ್ಸಿನಲ್ಲಿ ಇತಿಹಾಸದ ದೀಪ ಹತ್ತುತ್ತಿದ್ದಿತ್ತು. ಕಾಣದ ಹಾದಿಗಳ ಹುಡುಕಾಟ. ಓಹ್… ಕೆಲವು ಸ್ಥಳಗಳು ನಕ್ಷೆಯಲ್ಲಿಯೇ ಇರಲಿಲ್ಲ. ಹಳ್ಳಿಯ ಹಿರಿಯರನ್ನು ಕೂರಿಸಿಕೊಂಡು ಮಾತನಾಡಬೇಕಾಯ್ತು. ಅವರು “ಇಲ್ಲಿಂದ 2 ಕಿಲೋಮೀಟರ್ ಹೋಗಿ, ಎಡಕ್ಕೆ ಇರುವ ಬಂಡೆಯ ಹಿಂದೆ ಒಂದು ಹಳೆಯ ಗುಡ್ಡ, ಅದರೊಳಗೆ ಒಮ್ಮೆ ಆದಿಲ್‌ಶಾಹಿಗಳು…” ಹೀಗೆ ಹೇಳಿದ ದಾರಿಗಳು ಯಾವಾಗಲೂ ಸರಿಯಾಗಿರಲಿಲ್ಲ. ಆದರೂ ನಾನು ಹೋಗುತ್ತಿದ್ದೆ. ಬಿಸಿಲಿನಲ್ಲಿ, ಮಳೆಯಲ್ಲಿ, ಹಸಿದ ಹೊಟ್ಟೆಯಲ್ಲಿ, ಗಂಟೆಗಳ ಕಾಲ ನಡಿಗೆ. ಓ ದಾರಿ ತಪ್ಪಿದಾಗ ಬಂದ ನಿರಾಶೆಗಳು, ಸಿಕ್ಕಾಗ ಬಂದ ಆ ಸಂತೋಷ. ಇವುಗಳೇ ನನ್ನ ಪುಸ್ತಕಕ್ಕೆ ಮೌಲ್ಯ.

ಒಮ್ಮೆ, ಒಂದು ಗುಡ್ಡದ ಮೇಲೆ ಹತ್ತಿ ಕುಳಿತಿದ್ದೆ. ಮೂಲತಃ ದೊಡ್ಡ ಐತಿಹಾಸಿಕ ಸ್ಥಳವೂ ಅಲ್ಲ. ಸಾಮಾನ್ಯ ಕಲ್ಲಿನ ಜಾಗ. ಆದರೆ ಅದ್ದೊಂದು ಶತಮಾನದ ಮೌನ ನೆನಪು. ಅಲ್ಲಿ ಕುಳಿತು ನೋಟ್ಸ್ ಬರೆಯುತ್ತಿದ್ದಾಗ ಗಾಳಿ ಬೀಸಿದ ಮಣ್ಣಿನ ಕಣಗಳು ಕಾಗದದ ಮೇಲೇರಿದವು. ಆ ಕ್ಷಣ ನನ್ನ ಕಣ್ಣಿಗೆ ನೀರೇ ಬಂದವು. “ಇತಿಹಾಸವನ್ನು ನಾನು ಹುಡುಕುತ್ತಿದ್ದೇನೆ ಎನ್ನಿಸಿತ್ತು… ಆದರೆ ಇತಿಹಾಸವೇ ನನ್ನು ಹುಡುಕಿತ್ತು.” ಪುಸ್ತಕದ ಪುಟಗಳು ರೂಪಕೊಳ್ಳುತ್ತಿದ್ದಂತೆ… ನೋಡಿದ ಸ್ಥಳಗಳು, ಬರೆದ ಮಾಹಿತಿಗಳು, ಸಂಗ್ರಹಿಸಿದ ಕಥೆಗಳು, ಸ್ಥಳೀಯರ ಮಾತುಗಳು, ಚಿತ್ರಗಳು, ಪ್ರವಾಸ ದಿನಚರಿಗಳು ಇವೆಲ್ಲ ಸೇರಿ ನಿಧಾನವಾಗಿ ಒಂದು ರೂಪ ಪಡೆದುಕೊಳ್ಳುತ್ತಿದ್ದವು. ಕಾಲಕಾಲಕ್ಕೆ ನಿದ್ದೆ ಕಳೆದು ಹೋಗುತ್ತಿದ್ದಿತ್ತು.

ರಾತ್ರಿಯ ಮೌನದಲ್ಲಿ ಬರೆಯುವಾಗ ಮನಸ್ಸು ಮತ್ತೊಂದು ಯುಗಕ್ಕೆ ಪ್ರಯಾಣಿಸುತ್ತಿತ್ತು. ರಾತ್ರಿಯ ತಂಗಾಳಿಯ ಗಾಳಿಗಳು, ಕವಚಧಾರಿಗಳ ಹೆಜ್ಜೆ, ಅರಮನೆ ಸಂಭ್ರಮ, ಮಠಗಳ ಜಪ, ಬಾವಿಗಳ ತಂಪು, ಕೋಟೆಗೋಡೆಗಳ ಘನತೆ ಎಲ್ಲವೂ ನನ್ನ ಕಿಟಕಿಯ ಬಳಿ ಬಂದು ಕುಳಿತಿದ್ದವು. “ಬಿಜಾಪುರ ಭವ್ಯ ಪರಂಪರೆ” ಎಂಬ ಹೆಸರನ್ನು ಬರೆಯುವಾಗ, ನಾನು ಮತ್ತೊಂದು ಲೋಕದಲ್ಲಿದ್ದೆ. ಇದು ಕೇವಲ ಪುಸ್ತಕವಲ್ಲದೆ, ನಾನು ಮಾಡಿದ ಎರಡು ವರ್ಷಗಳ ಕಾಲದ ಶ್ರಮ, ಆತ್ಮಸಾಧನೆ. ಪುಸ್ತಕ ಪೂರ್ಣಗೊಳಿಸಿದ ದಿನ.. ಆ ದಿನ ನಾನು ಪುಸ್ತಕದ ಕೊನೆಯ ಪುಟವನ್ನು ಮುಚ್ಚಿದಾಗ, ವಿಜಯಪುರದ ಸೂರ್ಯಾಸ್ತಮಾನವು ನನಗೆ ಹೊಸ ಉದಯವಂತೆ ಭಾಸವಾಯಿತು. ಎರಡು ವರ್ಷಗಳ ಪರಿಶ್ರಮ, ನನ್ನ ಡ್ಯೂಟಿಯಿಂದ ಕದ್ದ ಸಮಯ, ನನ್ನ ಕುಟುಂಬದ ಸಹನೆ, ನನ್ನ ದೇಹದ ದಣಿವು, ಮನಸ್ಸಿನ ಅಪ್ರತಿಮ ಉತ್ಸಾಹ ಇವೆಲ್ಲ ಸೇರಿ ಈ ಒಂದು ಗ್ರಂಥ. ಪುಸ್ತಕ ನನ್ನ ಕೈಯಲ್ಲಿ ಸಿಡಿದು ಬಂದಾಗ, ನನ್ನೊಳಗೆ ನಡುಗುವ ಭಾವನೆ. “ಇದು ಬರಹ ಅಲ್ಲ… ಇದು ನನ್ನ ಬದುಕಿನ ಪಯಣ.” ಮರೆಯಾದ ಕೋಟೆಗೋಡೆಗಳು, ಮಣ್ಣು ತುಂಬಿದ ಗುಡ್ಡಗಳು, ಮೌನಗೊಳಗಿನ ಇತಿಹಾಸ ಇವುಗಳಿಗೆ ಜೀವ ತುಂಬಲು ನನಗೆ ಅವಕಾಶ ಸಿಕ್ಕಿತು. ಈ ಪಯಣ ನನಗೆ ಕಲಿಸಿದುದು ಇತಿಹಾಸ ಕೇವಲ ಕಲ್ಲಿನಲ್ಲಿ ಅಲ್ಲ, ಹೃದಯದಲ್ಲಿ ಬರೆದಿರುತ್ತದೆ. ಪ್ರವಾಸ ಕೇವಲ ಜಾಗ ಮಾರಾಟ ಅಲ್ಲ, ಆತ್ಮಸ್ಪರ್ಶದ ಹುಡುಕಾಟ. ಬರಹ ಕೇವಲ ಪದಗಳಿಲ್ಲ, ಬದುಕಿನ ಅನುಭವಗಳ ಪ್ರತಿಫಲ. ಪೊಲೀಸ್ ವೃತ್ತಿ ನನ್ನ ಕರ್ತವ್ಯ. ಆದರೆ ಇತಿಹಾಸ ಅದು ನನ್ನ ಆತ್ಮ. ವಿಜಯಪುರದ 40ಕ್ಕೂ ಹೆಚ್ಚು ಐತಿಹಾಸಿಕ ಸ್ಥಳಗಳ ಕುರಿತು ಪುಸ್ತಕ ಬರೆಯುವುದು ಕೇವಲ ಸಾಧನೆಯಲ್ಲ, ಈ ಪುಸ್ತಕ ನನ್ನ ಪ್ರಥಮ ಪುಸ್ತಕವಾಗಿದ್ದರಿಂದ ಇದರಲ್ಲಿ ಅನೇಕ ವಿಷಯಗಳನ್ನು ಇನ್ನೂ ಬರೆಯಬೇಕೆಂದೆನಿಸಿದರು ಕಡಿಮೆ ಬರೆದಿದ್ದೇನೆ. ಒಂದೊಂದು ಐತಿಹಾಸಿಕ ಸ್ಥಳಗಳ ಸ್ಮಾರಕಗಳ ಮಾಹಿತಿ ಇನ್ನೂ ತುಂಬಾ ಇದೆ ಅವುಗಳನ್ನು ಮುಂದಿನ ಪುಸ್ತಕದಲ್ಲಿ ಸಮಗ್ರವಾಗಿ ಬರೆದು ಆ ಸ್ಥಳಗಳ ಮಾಹಿತಿಯನ್ನು ಇನ್ನಷ್ಟು ಕಟ್ಟಿಕೊಡಲು  ಪ್ರಯತ್ನಿಸುತ್ತೇನೆ. ಹಾಗೆಯೇ ಈ 40 ಸ್ಥಳಗಳ ಕುರಿತು ಸಮಗ್ರವಾಗಿ ಕಲಾ ಮಾಧ್ಯಮ ಎಂಬ ಯುಟ್ಯೂಬ್ ಚಾನೆಲ್ ನಲ್ಲಿ ಅತ್ಯಂತ ಸರಳವಾಗಿ ವಿವರಣೆಯನ್ನು ನೀಡಿದ್ದೇನೆ ಆಸಕ್ತರು ಅಲ್ಲಿಯೂ ಕೂಡ ವೀಕ್ಷಿಸಬಹುದು.  ಇದು ನಾನು ಪುಸ್ತಕ ಬರವಣಿಗೆಯ ಆರಂಭ ಹಂತದಿಂದ ಕೊನೆಯವರೆಗೆ ಮಾಡಿದ ಕೆಲವು ಕೆಲಸಗಳ ಕುರಿತು ಸಂಕ್ಷಿಪ್ತವಾಗಿ ಈ ಲೇಖನದಲ್ಲಿ ಬರೆದಿರುತ್ತೇನೆ. ಇದು ನನ್ನ ಜೀವನದ ಬಹುಮುಖ್ಯ ಪಯಣ.

WhatsApp Group Join Now
Telegram Group Join Now
Share This Article