ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಕಾಣಿಸಿಕೊಂಡು ಬೈಕ್ ಶೋ ರೂಂ ಸುಟ್ಟು ಕರಕಲಾದ ಘಟನೆ ಬಿ.ನಾರಾಯಣಪುರದಲ್ಲಿ ಬುಧವಾರ ಸಂಜೆ ನಡೆದಿದೆ. ಅಂಗಡಿಯಲ್ಲಿದ್ದಂತಹ ಲಕ್ಷಾಂತರ ರೂಪಾಯಿ ಮೌಲ್ಯದ ಬೈಕ್ ಗಳು ಸುಟ್ಟು ಹೋಗಿವೆ. ಮಹಾದೇವಪುರ ವ್ಯಾಪ್ತಿಯಲ್ಲಿ ಈ ಒಂದು ಘಟನೆ ಸಂಜೆ ಸುಮಾರು 7.30ರ ಸುಮಾರಿಗೆ ನಡೆದಿದೆ.
ಶಾರ್ಟ್ ಸರ್ಕ್ಯೂಟ್ ನಿಂದ ಕಾಣಿಸಿಕೊಂಡ ಬೆಂಕಿ ಇಡೀ ಅಂಗಡಿಗೆ ವ್ಯಾಪಿಸಿದೆ. ಇದರಿಂದಾಗಿ ಶೋ ರೂಂನಲ್ಲಿದ್ದ 30 ಬೈಕ್, ಸರ್ವೀಸ್ ಸೆಂಟರ್ ನಲ್ಲಿದ್ದ 10ಕ್ಕೂ ಹೆಚ್ಚು ಬೈಕ್ ಗಳು ಸುಟ್ಟು ಹೋಗಿವೆ. ಇದರಿಂದಾಗಿ ಅಪಾರ ಪ್ರಮಾಣದ ಹಾನಿಯಾಗಿದೆ. ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದು, ಮಹಾದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇತ್ತೀಚೆಗೆ ಇಂತಹ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿವೆ. ಇದೇ ರೀತಿ ಶೋ ರೂಂನಲ್ಲಿ ಉಂಟಾದ ಬೆಂಕಿ ಅನಾಹುತದಿಂದ ಮಹಿಳಾ ಸಿಬ್ಬಂದಿಯೊಬ್ಬರು ಜೀವ ಕಳೆದುಕೊಂಡ ಘಟನೆ ಇತ್ತೀಚೆಗಷ್ಟೇ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.