ಪ್ರಜಾಸ್ತ್ರ ಸುದ್ದಿ
ದಾವಣಗೆರೆ(Davanagere): ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಉಪ ಚುನಾವಣೆಯ ರ್ಯಾಲಿಯಲ್ಲಿ ಭಾಗವಹಿಸಿದ್ದರು. ಈ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಅವಾಚ್ಯ ಶಬ್ಧಗಳಿಂದ ನಿಂದನೆ, ವಾಕ್ಸಮರ, ಚಪ್ಪಲಿ, ಪೊರಕೆ ಪ್ರದರ್ಶನ ನಡೆಯಿತು. ಈ ಮೂಲಕ ದೊಡ್ಡ ಹೈಡ್ರಾಮಾ ನಡೆದಿದ್ದು, ಇವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.
ತೆರೆದ ಕಾರಿನಲ್ಲಿ ರಾಷ್ಟ್ರೀಯ ಹೆದ್ದಾರಿಯಿಂದ ನಗರದ ಕೆ.ಬಿ ಬಡಾವಣೆಯ ಹತ್ತಿರದ ರಾಘವೇಂದ್ರ ಮಠದ ತನಕ ರ್ಯಾಲಿ ನಡೆಸಿದರು. ಇಲ್ಲಿಯೇ ಬಿಜೆಪಿ ಕಚೇರಿಯಿದ್ದು, ಕಾರ್ಯಕರ್ತರು ಕಾಯುತ್ತಿದ್ದರು. ಹೀಗಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ಮುಖಾಮುಖಿ ಆಯಿತು. ಧಿಕ್ಕಾರ, ಜೈಕಾರಗಳು ಜೋರಾಗಿ ಕೇಳಿ ಬಂದವು. ಬಿಜೆಪಿ ಕಾರ್ಯಕರ್ತರು ಶಾಸಕ ಪ್ರದೀಪ್ ಈಶ್ವರಗೆ ಚಪ್ಪಲಿ, ಪೊರೈಕೆ ಪ್ರದರ್ಶಿಸಿದರು.
ಶಾಸಕ ಪ್ರದೀಪ್ ಈಶ್ವರ್ ಕಾರಿನ ಮೇಲೆ ನಿಂತು ತೊಡೆ ತಟ್ಟಿದರು. ಇದರಿಂದ ಬಿಜೆಪಿ ಕಾರ್ಯಕರ್ತರು ಮತ್ತಷ್ಟು ಕೆರಳಿದರು. ಚಪ್ಪಲಿ, ಪೊರಕೆ ಪ್ರದರ್ಶಿಸಿದರು. ವ್ಯಕ್ತಿಯೊಬ್ಬರ ಶೂ ಎಸೆದಿದ್ದು, ಕಾರಿನ ಮೇಲೆ ಬಿತ್ತು. ಹೀಗಾಗಿ ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ಇದನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.




