ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಕರ್ನಾಟಕ ವಿಧಾನಸಭೆ ಅಧಿವೇಶನ ಮಾರ್ಚ್ 3, ಸೋಮವಾರದಿಂದ ಶುರುವಾಗಿದೆ. ಮೊದಲ ದಿನವೇ ಬಿಜೆಪಿ, ಜೆಡಿಎಸ್ ಪ್ರತಿಭಟನೆ ನಡೆಸಿದವು. ರಾಜ್ಯಪಾಲರ ಕುಲಾಧಿಪತಿ ಸ್ಥಾನಕ್ಕೆ ಕತ್ತರಿ ಹಾಕಿದ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಎಂದು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯಪಾಲ ಹಾಗೂ ರಾಜಭವನಕ್ಕೆ ಅವಮಾನ ಮಾಡುತ್ತಿದೆ. ರಾಜಭವನದ ಸಂವಿಧಾನಿಕ ಹುದ್ದೆಗೆ ಕಳಂಕ ತಂದ, ರಾಜ್ಯಪಾಲರ ಹೆಸರಲ್ಲಿ ನೀಚ ರಾಜಕಾರಣ, ರಾಷ್ಟ್ರಪತಿ, ರಾಜ್ಯಪಾಲರು, ನ್ಯಾಯಾಲಯ, ಇಡಿ, ಸಿಬಿಐ ವಿರೋಧಿ ಕಾಂಗ್ರೆಸ್ ಸರ್ಕಾರ.. ಹೀಗೆ ಬರೆದ ಪ್ಲೇ ಕಾರ್ಡ್ ಹಿಡಿದು ಪ್ರತಿಭಟನೆ ನಡೆಸಿದರು.
ವಿಧಾನಸೌಧ ಮುಂಭಾಗದಲ್ಲಿ ಬಿಜೆಪಿ, ಜೆಡಿಎಸ್ ಶಾಸಕರು ಪ್ರತಿಭಟನೆ ನಡೆಸಿ ಧಿಕ್ಕಾರ ಕೂಗಿದರು. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್, ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಾಣಸ್ವಾಮಿ, ಪ್ರತಿಪಕ್ಷದ ಉಪ ನಾಯಕ ಅರವಿಂದ್ ಬೆಲ್ಲದ್, ಸಿ.ಟಿ ರವಿ, ಶಶಿಕಲಾ ಜೊಲ್ಲೆ, ಎನ್.ರವಿಕುಮಾರ್, ಟಿ.ಸರವಣ ಸೇರಿದಂತೆ ವಿಧಾನಸಭೆ ಹಾಗೂ ಪರಿಷತ್ ನ ವಿಪಕ್ಷಗಳ ಸದಸ್ಯರು ಭಾಗವಹಿಸಿದ್ದರು.
ಇನ್ನು ಜಂಟಿ ಬಜೆಟ್ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಷಣ ಮಾಡಿದರು. ಅಭಿವೃದ್ದಿ ವೇಗ ಹಾಗೂ ಹಣಕಾಸು ವ್ಯವಸ್ಥೆಯಲ್ಲಿ ಮತ್ತಷ್ಟು ಗಟ್ಟಿಗೊಳಿಸುವಲ್ಲಿ ಸರ್ಕಾರ ಯಶಸ್ವಿಯಾಗಿದೆ. ಮಹಾತ್ಮ ಗಾಂಧಿ ಹೇಳಿದಂತೆ ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಕಣ್ಣೀರು ಒರೆಸುವ ಕೆಲಸವನ್ನು ಮಾಡಲು ಸರ್ಕಾರ ಬದ್ಧವಾಗಿದೆ. 2024-25ನೇ ಸಾಲಿನ ಬಜೆಟ್ ನಲ್ಲಿನ 344 ಘೋಷಣೆಗಳ ಪೈಕ್ 331 ಘೋಷಣೆಗಳಿಗೆ ಸರ್ಕಾರಿ ಆದೇಶ ಹೊರಡಿಸಲಾಗಿದೆ. ಎಲ್ಲ ಕಾರ್ಯಕ್ರಮಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿವೆ ಎಂದರು.