ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಕೇಳಿ ಬಂದ ಆರೋಪ ಸಂಬಂಧ ರಾಜ್ಯಪಾಲರು ತನಿಖೆಗೆ ಆದೇಶಿಸಿದ್ದಾರೆ. ಇದನ್ನು ಕಾಂಗ್ರೆಸ್ ನಾಯಕರು ಖಂಡಿಸಿದ್ದು, ರಾಜ್ಯಪಾಲರ ನಡೆಯನ್ನು ಪ್ರಶ್ನಿಸಿ ವಾಗ್ದಾಳಿ ನಡೆಸಿದ್ದಾರೆ. ಇನ್ನೊಂದು ಕಡೆ ಬಿಜೆಪಿ ನಾಯಕರು ಸಿಎಂ ರಾಜೀನಾಮೆಗೆ ಆಗ್ರಹಿಸಿದ್ದಾರೆ. ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ರಾಜೀನಾಮೆ ಸಲ್ಲಿಸಬೇಕು ಎಂದಿದ್ದಾರೆ.
ಕೇಂದ್ರ ಸಚಿವ ಪ್ರಲ್ಹಾದ್(Prahlad Joshi) ಜೋಶಿ ಮಾತನಾಡಿ, ಸಿದ್ದರಾಮಯ್ಯನವರು ತಪ್ಪು ಮಾಡಿಲ್ಲವೆಂದ ಮೇಲೆ ಭಯ ಪಡುವ ಅಗತ್ಯವಿಲ್ಲ. ತಮ್ಮ ಜೀವನ ತೆರೆದ ಪುಸ್ತಕ ಎಂದು ಹೇಳುವ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಕಾನೂನು ಹೋರಾಟ ನಡೆಸಲು ನಮ್ಮದೇನು ತಕರಾರು ಇಲ್ಲ ಎಂದರು. ಸಮಗ್ರ ತನಿಖೆಯಾಗಬೇಕೆಂದು ಸಮಯ ತೆಗೆದುಕೊಂಡು ಕಾನೂನು ತಜ್ಞರ ಜೊತೆ ಚರ್ಚಿಸಿ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದಾರೆ ಎಂದರು.
ಮುಖ್ಯಮಂತ್ರಿ ರಕ್ಷಿಸಲು, ಭ್ರಷ್ಟಾಚಾರ ಮುಚ್ಚಿ ಹಾಕಲು ಸಚಿವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ವಾಲ್ಮೀಕಿ(Valmiki Nigama) ನಗಮದ ಹಗರಣ, ಮುಡಾ ಹಗರಣದಲ್ಲಿ ಸಿಎಂ ನೈತಿಕ ಹೊಣೆ ಹೊತ್ತು ರಾಜೀನಾಮೆ ಸಲ್ಲಿಸಬೇಕು ಎಂದು ಕೇಂದ್ರ ಸಚಿವೆ ಶೋಭಾ(shoba karandlaje) ಕರಂದ್ಲಾಜೆ ಹೇಳಿದ್ದಾರೆ. ಮುಡಾದಲ್ಲಿ ದಲಿತರ ಜಮೀನು ತೆಗೆದುಕೊಂಡಿದ್ದಾರೆ. ಸಿಎಂ ಪತ್ನಿ ಕಾನೂನು ಬಾಹಿರವಾಗಿ ಜಾಗ ಪಡೆದಿದ್ದಾರೆ. ಕೆಂಪಯ್ಯ ಸಮಿತಿ ವರದಿ ಎಲ್ಲಿ ಹೋಯಿತು. 2013ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ 20ಕ್ಕೂ ಹೆಚ್ಚು ಪ್ರಕರಣಗಳು ಲೋಕಾಯುಕ್ತದಲ್ಲಿದ್ದವು ಎಂದು ವಾಗ್ದಾಳಿ ನಡೆಸಿದರು.
ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ರಾಜೀನಾಮೆ ಕೊಡುವುದು ಅನಿವಾರ್ಯ. ತನಿಖೆಯನ್ನು ಸಿಬಿಐಗೆ ವಹಿಸಬೇಕು. ಪತ್ನಿ ಹೆಸರಲ್ಲಿ 14 ಸೈಟುಗಳನ್ನು ಪಡೆದಿದ್ದು ಕಾನೂನು ಬಾಹಿರ. ಈಗಲೇ ರಾಜೀನಾಮೆ ಕೊಡುತ್ತಾರೋ ತನಿಖೆ ಶುರುವಾದ್ಮೇಲೆ ಕೊಡುತ್ತಾರೋ ನೋಡಬೇಕು ಎಂದು ಬಿಜೆಪಿ ಸಂಸದ ಜಗದೀಶ್(jagadish shettar) ಶೆಟ್ಟರ್ ಹೇಳಿದ್ದಾರೆ. ಸಿಎಂ ವಿರುದ್ಧ ರಾಜ್ಯಪಾಲರು ತನಿಖೆಗೆ ಆದೇಶ ನೀಡಿದ್ದು, ಬಿಜೆಪಿ ಪಾದಯಾತ್ರೆಗೆ ಸಿಕ್ಕ ಜಯ ಎಂದು ವಿಪಕ್ಷ ನಾಯಕ ಆರ್.ಅಶೋಕ್(R Ashoka) ಹೇಳಿದ್ದಾರೆ. 86 ಸಾವಿರ ಜನರು ಅರ್ಜಿ ಸಲ್ಲಿಸಿ ನಿವೇಶನಕ್ಕಾಗಿ ಕಾಯುತ್ತಿದ್ದಾರೆ. ಅವರಿಗೆ ನ್ಯಾಯ ಸಿಗಲಿ ಎಂದರು.