ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಜಮ್ಮು ಕಾಶ್ಮೀರದ ಫೆಹಲ್ಗಾಮ್ ನಲ್ಲಿ ಉಗ್ರರು ನಡೆಸಿದ ದಾಳಿಗೆ ಪ್ರತಿಕಾರವಾಗಿ ಭಾರತ ಆಪರೇಷನ್ ಸಿಂಧೂರ ನಡೆಸಿತು. ಈ ಕಾರ್ಯಾಚರಣೆಯ ಬಗ್ಗೆ ಮಾಹಿತಿ ನೀಡಿದ ಸೇನಾಧಿಕಾರಿಗಳಲ್ಲಿ ಕರ್ನಲ್ ಸೋಫಿಯಾ ಖುರೇಷಿ ಸಹ ಒಬ್ಬರು. ಇವರ ಬಗ್ಗೆ ಮಧ್ಯಪ್ರದೇಶ ಬಿಜೆಪಿ ಸಚಿವ ವಿಜಯ್ ಶಾ, ಸಾರ್ವಜನಿಕ ಸಭೆಯಲ್ಲಿ ಉಗ್ರರ ಸಹೋದರಿ ಎಂದು ಹೇಳುವ ಮೂಲಕ ದೊಡ್ಡ ವಿವಾದ ಸೃಷ್ಟಿಸಿದ್ದಾರೆ. ಇವರ ಹೇಳಿಕೆಯನ್ನು ರಾಷ್ಟ್ರೀಯ ಮಹಿಳಾ ಆಯೋಗ ಖಂಡಿಸಿದೆ.
ಸಮವಸ್ತ್ರದಲ್ಲಿ ಮಹಿಳೆಗೆ ಪ್ರತಿಯೊಬ್ಬರು ಗೌರವ ಕೊಡಬೇಕು. ಜವಾಬ್ದಾರಿಯುತ ಸ್ಥಾನದಲ್ಲಿ ಇರುವ ಕೆಲವು ವ್ಯಕ್ತಿಗಳು ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುತ್ತಿರುವುದು ಅತ್ಯಂತ ದುರದುಷ್ಟಕರು. ಸೋಫಿಯಾ ಖುರೇಷಿ ಈ ರಾಷ್ಟ್ರದ ಹೆಮ್ಮೆಯ ಮಗಳು ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ವಿಜಯಾ ರಹತ್ಕರ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಅವರ ಕಠಿಣ ಪರಿಶ್ರಮ, ಸಮರ್ಪಣೆ ಹಾಗೂ ನಾಯಕತ್ವದ ಶಕ್ತಿಯನ್ನು ಗೌರವಿಸುವುದು ಎಲ್ಲರ ಜವಾಬ್ದಾರಿ. ಕರ್ನಲ್ ಸೋಫಿಯಾ ರೀತಿಯ ಧೈರ್ಯವಂತೆ ಹೆಣ್ಮಗಳ ಬಗ್ಗೆ ಇಡೀ ದೇಶವೇ ಹೆಮ್ಮೆ ಪಡುತ್ತದೆ. ಇವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವುದನ್ನು ಖಂಡಿಸಬೇಕು. ದೇಶದ ರಕ್ಷಣಾ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ ಮಹಿಳೆಗೆ ಮಾಡಿದ ಅಪಮಾನವಾಗಿದೆ ಎಂದು ಕಿಡಿ ಕಾರಿದ್ದಾರೆ. ಯಾರು ನಮ್ಮ ಹೆಣ್ಮಕ್ಕಳ ಸಿಂಧೂರ ಅಳಿಸಿದರೊ ಅವರಿಗೆ ತಕ್ಕ ಪಾಠ ಕಲಿಸಲು ಅವರ ಸಹೋದರಿಯನ್ನೇ ಕಳಿಸಿದೆವು ಎನ್ನುವ ಹೇಳಿಕೆಯನ್ನು ನೀಡುವ ಮೂಲಕ ಬಿಜೆಪಿ ಸಚಿವ ವಿಜಯ್ ಶಾ, ಕರ್ನಲ್ ಸೋಫಿಯಾ ಖುರೇಷಿ ಅವರನ್ನು ಉಗ್ರರ ಸಹೋದರಿ ಎಂದು ಹೇಳಿದ್ದಾರೆ. ಮಧ್ಯಪ್ರದೇಶ ಹೈಕೋರ್ಟ್ ಸಚಿವ ವಿಜಯ್ ಶಾ ವಿರುದ್ಧ ಎಫ್ಐಆರ್ ದಾಖಲಿಸಲು ಸೂಚಿಸಿದೆ.